ವರ್ಷಾಂತ್ಯಕ್ಕೆ ಗ್ರಾ.ಪಂ. ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.28: ಕೋವಿಡ್ ಕಾರಣದಿಂದಾಗಿ ಮುಂದೂಡಿಕೆ ಮಾಡಲ್ಪಟ್ಟಿದ್ದ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಈ ವರ್ಷಾಂತ್ಯಕ್ಕೆ ನಡೆಸಲು ಚುನಾವಣಾ ಆಯೋಗ ಸಿದ್ಧತೆಯಲ್ಲಿ ತೊಡಗಿಕೊಂಡಿದೆ.
ಕೊರೋನ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗ ಹೊಸ ನೀತಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ 4-5 ತಿಂಗಳಿನಿಂದ ಚುನಾವಣೆ ನಡೆಯದೇ ಆಡಳಿತಾಧಿಕಾರಿಗಳ ಕೈಯಲ್ಲಿರುವ ಗ್ರಾಮ ಪಂಚಾಯತ್ಗಳು ಕೆಲವೇ ತಿಂಗಳಲ್ಲಿ ಜನಪ್ರತಿನಿಧಿಗಳ ಕೈಗೆ ಹಸ್ತಾಂತರಗೊಳ್ಳಲಿದೆ.
ಕೊರೋನ ಸೋಂಕಿನ ಪ್ರಕರಣಗಳ ತೀವ್ರತೆ ಕಡಿಮೆಯಾಗುತ್ತಿದ್ದಂತೆಯೇ ಚುನಾವಣೆ ನಡೆಸಲು ಆಯೋಗ ತುದಿಗಾಲಿನಲ್ಲಿ ನಿಂತಿದೆ. ಹೀಗಾಗಿ, ಸೋಂಕು ಹತೋಟಿಗೆ ಬಂದರೆ, ಡಿಸೆಂಬರ್ ನಲ್ಲಿ ಆಯೋಗ ಚುನಾವಣೆ ನಡೆಸುವುದು ಬಹುತೇಕ ಖಚಿತವಾಗಿದೆ.
ವ್ಯವಸ್ಥಿತ ಸಿದ್ಧತೆ: ಮತದಾರರ ಪಟ್ಟಿ, ಮತಗಟ್ಟೆ, ಮತಗಟ್ಟೆ ಸಿಬ್ಬಂದಿಗೆ ಚುನಾವಣಾ ತರಬೇತಿ, ಮೀಸಲಾತಿ ಪಟ್ಟಿ ಸೇರಿ ಸಕಲ ಸಿದ್ಧತೆಗಳನ್ನು ಚುನಾವಣಾ ಆಯೋಗ ಬಹು ಹಿಂದೆಯೇ ಮಾಡಿಕೊಂಡಿದೆ, ಪಕ್ಷಗಳನ್ನು ಬೇರು ಮಟ್ಟದಲ್ಲಿ ಬಲವರ್ಧನೆಗೊಳಿಸುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಲಿವೆ.
ಸಿದ್ಧತೆ ಪ್ರಗತಿಯಲ್ಲಿ: ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಅಗತ್ಯ ಸಿದ್ಧತೆ ನಡೆಯುತ್ತಿದ್ದು, ಕೊಡಗು, ಮೈಸೂರು, ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 27 ಜಿಲ್ಲೆಗಳ ಗ್ರಾಮ ಪಂಚಾಯತ್ಗಳ ಮೀಸಲಾತಿಯ ಅಂತಿಮ ಗೆಜೆಟ್ ಹೊರಡಿಸಲಾಗಿದೆ. ಆ.31 ರೊಳಗೆ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಕಾಂಗ್ರೆಸ್ನ ಕೆ.ಸಿ.ಕೊಂಡಯ್ಯ ಹಾಗೂ ಮತ್ತಿತರರು ಸಲ್ಲಿಸಿರುವ ಪಿಐಎಲ್ ಅನ್ನು ವಿಚಾರಣೆ ನಡೆಸಿರುವ ವಿಭಾಗೀಯ ನ್ಯಾಯಪೀಠಕ್ಕೆ ಚುನಾವಣಾ ಆಯೋಗದ ಪರ ವಕೀಲ ಕೆ.ಎನ್.ಫಣೀಂದ್ರ ಲಿಖಿತ ಹೇಳಿಕೆ ಸಲ್ಲಿಸಿ ಈ ಮಾಹಿತಿ ನೀಡಿದ್ದಾರೆ. ಮೀಸಲಾತಿ, ಮತದಾರರ ಅಂತಿಮ ಪಟ್ಟಿ, ವೇಳಾಪಟ್ಟಿ ಪ್ರಕಟಕ್ಕೆ ಸಂಬಂಧಿಸಿ ಪ್ರಗತಿ ವರದಿ ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಿ ಸೆ.15 ಕ್ಕೆ ವಿಚಾರಣೆ ಮುಂದೂಡಲಾಗಿದೆ.







