ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ: ಪೊಲೀಸ್ ರಕ್ಷಣೆ ಕೊಟ್ಟರೆ ಹೆಸರು ಬಹಿರಂಗ ಮಾಡುತ್ತೇನೆ ಎಂದ ಇಂದ್ರಜಿತ್ ಲಂಕೇಶ್

Photo: instagram
ಬೆಂಗಳೂರು, ಆ.28: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ಇರುವುದು ನಿಜ. ನಾನೇ ನೋಡಿದ್ದೀನಿ ಎಂದು ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡಿನ ಹಿಂದೆ ಬಿದ್ದು ಯುವ ನಟ, ನಟಿಯರು ಡ್ರಗ್ಸ್ ಹಿಂದೆ ಬಿದ್ದಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ನೈಟ್ ಪಾರ್ಟಿ, ರೇವ್ ಪಾರ್ಟಿ ಎಲ್ಲವೂ ನಡೀತಿದೆ. ಯುವ ನಟರು ಡ್ರಗ್ಸ್ ವ್ಯಸನಿಗಳಾಗಿದ್ದಾರೆ. ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ನನಗೆ ಪೊಲೀಸ್ ಇಲಾಖೆ ರಕ್ಷಣೆ ಕೊಟ್ಟರೆ ಖಂಡಿತಾ ಹೆಸರು ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾರೆ.
ಕೊಕೇನ್ ಮಾಫಿಯಾದವರೆಗೂ ನಮ್ಮ ಇಂಡಸ್ಟ್ರಿ ಬೆಳೆದಿದೆ. ದೊಡ್ಡ ಸ್ಟಾರ್ ನಟರು ನನ್ನ ಸ್ನೇಹಿತರು. ನಾನು ನೋಡಿದಂತೆ ದೊಡ್ಡ ಸ್ಟಾರ್ ಗಳು ಇದರ ವ್ಯಸನಿಗಳಾಗಿದ್ದಾರೆ. ಆದರೆ ಒಂದೆರಡು ಸಿನಿಮಾಗಳು ಮಾಡಿದ ನಟ ನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಮುಳುಗಿದ್ದಾರೆ. ದುಡ್ಡಿನ ವ್ಯಾಮೋಹ, ಐಷಾರಾಮಿ ಕಾರಿನ ಹಿಂದೆ ಬಿದ್ದು ಇಂತಹ ಕೆಲಸಗಳಿಗೆ ಕೈ ಹಾಕುತ್ತಿದ್ದಾರೆ. ಈ ಹಿಂದೆ ಇಂತಹ ಸಾಕಷ್ಟು ಪ್ರಕರಣಗಳು ಸಿಕ್ಕಿವೆ. ಆದರೆ ಪ್ರಕರಣಗಳೆಲ್ಲವೂ ಮುಚ್ಚಿ ಹೋಗಿವೆ ಎಂದು ತಿಳಿಸಿದರು.







