ದೀಪ ಹಚ್ಚಿ ಜಾಗಟೆ ಬಡಿದರೂ ಕೊರೋನ ಯಾಕೆ ಕಡಿಮೆಯಾಗಿಲ್ಲ: ಕುಕ್ಯಾನ್ ಪ್ರಶ್ನೆ
ಮಂಗಳೂರಿನಲ್ಲಿ ಸಿಪಿಐ ಧರಣಿ

ಮಂಗಳೂರು, ಆ.28: ಜಗತ್ತಿನಾದ್ಯಂತ ಕೊರೋನ ಸೋಂಕು ಹರಡಿದಾಗ ಆಡಳಿತಗಾರರು ವೈಜ್ಞಾನಿಕ ಕ್ರಮಗಳನ್ನು ಅಳವಡಿಸುವುದರ ಮೂಲಕ ಅದರ ನಿವಾರಣೆಗಾಗಿ ಶ್ರಮವಹಿಸುತ್ತಿದ್ದಾರೆ. ಆದರೆ ಭಾರತದ ಆಡಳಿತಗಾರರು ದೀಪ ಹಚ್ಚಿರಿ, ಜಾಗಟೆ ಬಡಿಯಿರಿ ಎಂದು ಹೇಳುತ್ತಾ ಜನರನ್ನು ಸೋಂಕಿನ ಭಯ ಹುಟ್ಟಿಸಿದರು. ಅವರಿಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಲು ಹೇಳುವ ಬದಲು ಅವರನ್ನು ಕತ್ತಲೆಯಲ್ಲಿರುವಂತೆ ಮೂಢರನ್ನಾಗಿಸಲಾಯಿತು. ಹಾಗಾದರೆ ದೀಪ ಹಚ್ಚಿ ಜಾಗಟೆ ಬಡಿದರೂ ಕೊರೋನ ಸೋಂಕು ಯಾಕೆ ಕಡಿಮೆಯಾಗಿಲ್ಲ ಎಂದು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಪ್ರಶ್ನಿಸಿದ್ದಾರೆ.
ಸುಗ್ರೀವಾಜ್ಣೆ ಮೂಲಕ ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ, ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ ಸರಕಾರದ ನೀತಿಗಳ ವಿರುದ್ಧ ಮಂಗಳೂರು ಮಿನಿ ವಿಧಾನಸೌಧದ ಎದುರು ಸಿಪಿಐ ನೇತೃತ್ವದಲ್ಲಿ ಶುಕ್ರವಾರ ನಡೆದ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಿಪಿಐ ನಾಯಕರಾದ ಬಿ. ಶೇಖರ್, ಸುರೇಶ್ ಕುಮಾರ್ ಬಂಟ್ವಾಳ್, ಎಂ.ಕರುಣಾಕರ್, ಕೆ.ವಿ.ಭಟ್, ಹೆಚ್.ವಿ.ರಾವ್, ಕೆ. ತಿಮ್ಮಪ್ಪ, ಎ.ಪಿ ರಾವ್, ಸರಸ್ವತಿ ಕೆ, ಸುಲೋಚನ, ಸರೋಜಿನಿ ಕೆ, ಬಾಬು ಭಂಡಾರಿ, ಪ್ರೇಮನಾಥ್, ಶ್ರೀನಿವಾಸ್ ಭಂಡಾರಿ, ಶಶಿಕಲಾ ಉಡುಪಿ, ಮೀನಾಕ್ಷಿ ಬಜಪೆ, ಹರ್ಷಿತ್ ಬಂಟ್ವಾಳ್ ವಹಿಸಿದ್ದರು. ವಿ.ಎಸ್. ಬೇರಿಂಜ ವಂದಿಸಿದರು.







