ಬೆಂಗಳೂರು ಹಿಂಸಾಚಾರ ಪ್ರಕರಣ: ಓರ್ವ ಪೊಲೀಸ್ ಕಸ್ಟಡಿಗೆ

ಬೆಂಗಳೂರು, ಆ.28: ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಭೆ ಪ್ರಕರಣ ಸಂಬಂಧ ಎಸ್ ಡಿಪಿಐ ಕಾರ್ಯಕರ್ತ ಎನ್ನಲಾದ ಫಿರೋಝ್ ಪಾಷಾ ಎಂಬುವರನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಘಟನೆ ಬೆಳಕಿಗೆ ಬಂದ ದಿನದಲ್ಲೇ ಫಿರೋಝ್ ಪಾಷಾನನ್ನು ಬಂಧಿಸಲಾಗಿತ್ತು. ಆದರೆ, ಕೊರೋನ ಸೋಂಕು ದೃಢಪಟ್ಟಿದ್ದರಿಂದ ನ್ಯಾಯಾಲಯದ ನಿರ್ದೇಶನದಂತೆ ಆತನನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಸೂಕ್ತ ಚಿಕಿತ್ಸೆ ಪಡೆದು ಗುರುವಾರವಷ್ಟೇ ಫಿರೋಝ್ ಪಾಷಾ ಕೇಂದ್ರದಿಂದ ಹೊರಬಂದಿದ್ದು, ಆತನನ್ನು ಪುನಃ ವಶಕ್ಕೆ ಪಡೆದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.
ಆರೋಪವೇನು?: ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದ ಸುದ್ದಿಯೊಂದನ್ನು ಉಲ್ಲೇಖಿಸಿ ಫಿರೋಝ್ ಪಾಷಾ ಫೇಸ್‍ಬುಕ್‍ನಲ್ಲಿ ಫೋಸ್ಟ್ ಹಾಕಿದ್ದ. ಅದಕ್ಕೆ ಆರೋಪಿ ನವೀನ್ ಪ್ರತಿಕ್ರಿಯಿಸಿದ್ದ. ಇದು ಅವಹೇಳನಕಾರಿ ಎಂದು ಆರೋಪಿಸಿದ್ದ ಫಿರೋಜ್ ಪಾಷಾ ಹಾಗೂ ಇತರರು, ಕೆ.ಜಿ ಹಳ್ಳಿ ಠಾಣೆಗೆ ನುಗ್ಗಿ ವಾಹನಗಳಿಗೆ ಬೆಂಕಿ ಹಚ್ಚಿ ಗಲಭೆ ಸೃಷ್ಟಿಸಿದ್ದ ಆರೋಪದಡಿ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.





