ಶೈಕ್ಷಣಿಕ ವರ್ಷದ ಶುಲ್ಕ ಹೆಚ್ಚಿಸದಂತೆ ಸುತ್ತೋಲೆ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಆ.28: ಪ್ರಸ್ತುತ ಸಾಲಿನಲ್ಲಿ ಶೈಕ್ಷಣಿಕ ವರ್ಷದ ಶುಲ್ಕ ಹೆಚ್ಚಿಸದಂತೆ ಸರಕಾರ ಸುತ್ತೋಲೆ ಹೊರಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಕಳೆದ ವರ್ಷ ಸಂಗ್ರಹಿಸಿದ ಮೊತ್ತಕ್ಕಿಂತ ಕಡಿಮೆ ಶುಲ್ಕ ಸಂಗ್ರಹಿಸಬಹುದು ಎಂದು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ. ಕಳೆದ ವರ್ಷದ ಬಾಕಿ ಶುಲ್ಕ ಹಾಗೂ ಪ್ರಸಕ್ತ ವರ್ಷದ ಶುಲ್ಕದಲ್ಲಿ ಶೇ.50ರಷ್ಟನ್ನು ಸಂಗ್ರಹಿಸಲು ಮಧ್ಯಂತರ ಅನುಮತಿ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಶುಲ್ಕವನ್ನು ಸಂಗ್ರಹಿಸದಿದ್ದರೆ ಸಂಸ್ಥೆಗಳನ್ನು ಮುನ್ನಡೆಸುವುದು ಬಹಳ ಕಷ್ಟವಾಗುತ್ತದೆ. ಮದ್ರಾಸ್ ಹೈಕೋರ್ಟ್ ಶೇ.40ರಷ್ಟು ಶುಲ್ಕ ಸಂಗ್ರಹಕ್ಕೆ ಅನುಮತಿ ನೀಡಿದೆ. ರಾಜ್ಯದಲ್ಲೂ ಶುಲ್ಕ ಸಂಗ್ರಹಕ್ಕೆ ಅನುಮತಿ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರ ಮೊದಲು ವಿವರಣೆ ನೀಡಲಿ ಬಳಿಕ ಮಧ್ಯಂತರ ಪರಿಹಾರವನ್ನು ನ್ಯಾಯಾಲಯ ಪರಿಗಣಿಸಲಿದೆ ಎಂದು ತಿಳಿಸಿತು.





