ಜಿಎಸ್ಟಿ ಪರಿಹಾರ ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ ನೀತಿ: ರವಿಕೃಷ್ಣಾ ರೆಡ್ಡಿ

ಬೆಂಗಳೂರು, ಆ.28: ಜಿಎಸ್‍ಟಿ ಪರಿಹಾರ ಮೊತ್ತವನ್ನು ನೀಡುವಲ್ಲಿ ತಾರತಮ್ಯ ಎಸಗುತ್ತಿರುವ ಕೇಂದ್ರ ಸರಕಾರ ನಿಲುವು ತಾರತಮ್ಯದಿಂದ ಕೂಡಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಖಂಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಪಾಲು ಹೆಚ್ಚಿದೆ. ಆದರೂ ನಮ್ಮ ಪಾಲನ್ನು ಕೇಂದ್ರ ಸರಕಾರ ನೀಡುತ್ತಿಲ್ಲ. ನಮ್ಮ ಪಾಲನ್ನು ತೆಗೆದುಕೊಂಡು ಉತ್ತರ ಭಾರತದ ರಾಜ್ಯಗಳಿಗೆ ಹಂಚುತ್ತಿದ್ದಾರೆಂದು ಆಪಾಧಿಸಿದ್ದಾರೆ.
ಆರ್ಥಿಕ ಸಂಕಷ್ಟವನ್ನು ಮುಂದೆ ಮಾಡಿ ಜಿಎಸ್ಟಿ ಪರಿಹಾರ ಮೊತ್ತವನ್ನು ನೀಡಲಾಗದು. ಆದರೆ, ಸಾಲದ ರೂಪದಲ್ಲಿ ಕೊಡಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ. ರಾಜ್ಯದ ಪಾಲಿನ ತೆರಿಗೆಯನ್ನು ತೆಗೆದುಕೊಂಡು ಅದನ್ನು ಸಾಲದ ರೂಪದಲ್ಲಿ ಪಡೆಯಿರಿ ಎನ್ನುವುದು ಅಕ್ಷಮ್ಯವೆಂದು ಅವರು ಹೇಳಿದ್ದಾರೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯಗಳು ಸಾಲ ಪಡೆಯುವ ಪ್ರಮಾಣವನ್ನು ಜಿಎಸ್‍ಡಿಪಿಯ ಶೇ.5ಕ್ಕೆ ಏರಿಸಿ ಅದನ್ನು ಕೆಲವು ಕಾನೂನುಗಳ ಮಾರ್ಪಾಟು ಮಾಡಲು ಬಳಸಿಕೊಳ್ಳಲಾಗಿದೆ. ಇದರ ಪರಿಣಾಮವೇ ರಾಜ್ಯವು ತರಾತುರಿಯಲ್ಲಿ ಭೂ ಸುಧಾರಣೆ ಕಾಯ್ದೆ ಹಾಗೂ ಇತರೆ ಸುಗ್ರೀವಾಜ್ಞೆ ಜಾರಿಯಾಗಿರುವುದು. ರಾಜ್ಯಗಳು ಹಣಕಾಸು ಸ್ವಾತಂತ್ರ್ಯ ಕಳೆದುಕೊಂಡರೆ ಏನಾಗುತ್ತದೆ ಎಂಬುದನ್ನು ಸದ್ಯದ ಪರಿಸ್ಥಿತಿ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.







