ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ಗೆ ಬಲವಂತದ ಕ್ವಾರಂಟೈನ್

ಗಿರಿಧಿ (ಜಾರ್ಖಂಡ್), ಆ. 29: ಕೋವಿಡ್ ನಿಯಮ ಉಲ್ಲಂಘನೆ ಆರೋಪದಲ್ಲಿ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರನ್ನು ಜಾರ್ಖಂಡ್‌ನಲ್ಲಿ 14 ದಿನಗಳ ಬಲಂವತದ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲೆಯ ಹಿರಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಉನ್ನಾವೊದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಧನಬಾದ್ ಮೂಲಕ ಗಿರಿಧಿಗೆ ಸಂಸದ ಸಾಕ್ಷಿ ಮಹಾರಾಜ್ ಆಗಮಿಸಿದ್ದರು. ಸಾಕ್ಷಿ ಮಹಾರಾಜ್ ಅವರು ಧನ್‌ಬಾದ್‌ಗೆ ರಸ್ತೆಯಲ್ಲಿ ದಿಲ್ಲಿಗೆ ಬಂದು, ಅಲ್ಲಿಂದ ರೈಲು ಹತ್ತಿ ಪ್ರಯಾಣಿಸುತ್ತಿರುವ ಸಂದರ್ಭ ಪಿರ್ಟಾಂಡ್ ಪೊಲೀಸ್ ಠಾಣೆ ಸಮೀಪ ಅವರನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿತು ಹಾಗೂ ಶಾಂತಿ ಭವನ ಆಶ್ರಮಕ್ಕೆ ಕ್ವಾರಂಟೈನ್‌ಗೆ ಕಳುಹಿಸಿತು ಎಂದು ಉಪ ಆಯುಕ್ತ ರಾಹುಲ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಹೊರ ರಾಜ್ಯಗಳಿಂದ ಆಗಮಿಸುವವರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು ಎಂಬ ರಾಜ್ಯ ಸರಕಾರದ ಆದೇಶ ಹೊರಡಿಸಿತ್ತು. ಆದರೆ, ಸಾಕ್ಷಿ ಮಹಾರಾಜ್ ಈ ನಿಯಮವನ್ನು ಉಲ್ಲಂಘಿಸಿರುವುದರ ಹಿನ್ನೆಲೆಯಲ್ಲಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.





