ಅಂತರ್ ಜಿಲ್ಲಾ ಕಳವು ಆರೋಪಿ ಬಂಧನ: 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಹಾಸನ, ಆ.29: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಲಿಗೆ ಮತ್ತು ಕಳ್ಳತನ ಸೇರಿ 14 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು 35 ಲಕ್ಷ ರೂ. ಬೆಲೆ ಬಾಳುವ 675 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಹಾಸನ ಗ್ರಾಮಾಂತರ ವೃತ್ತದ ಸಿಪಿಐ ತಂಡ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, 2020 ಜನವರಿ ತಿಂಗಳಲ್ಲಿ ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯ ಅಟ್ಟಾವರ ಹೊಸಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಂಜೇಗೌಡ ಎಂಬವರ ಮನೆಯಲ್ಲಿದ್ದ ಬೀರುವಿನ ಲಾಕರ್ ತೆಗೆದು 2,25,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ದೂರು ನೀಡಿದ ಮೇರೆಗೆ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆಯನ್ನು ಕೈಗೊಳ್ಳಲಾಯಿತು ಎಂದರು.
ಹಾಸನ ಗ್ರಾಮಾಂತರ ವೃತ್ತ ಸಿಪಿಐ, ವೈ. ಸತ್ಯನಾರಾಯಣರವರ ನೇತೃತ್ವದಲ್ಲಿ ಗೊರೂರು ಪೊಲೀಸ್ ಠಾಣೆ ಪಿಎಸ್‌ಐ ಜಗದೀಶ್.ಬಿ.ಸಿ ಮತ್ತು ಸಿಬ್ಬಂದಿಯನ್ನು ಒಳಗೊಂಡಂತೆ ವಿಶೇಷ ತಂಡವನ್ನು ರಚಿಸಲಾಯಿತು. ಈ ತಂಡವು ಆರೋಪಿಗಳ ಬಗ್ಗೆ ಖಚಿತ ಮಾಹಿತಿಯನ್ನು ಸಂಗ್ರಹಿಸಿ ಆರೋಪಿಯ ಬಗ್ಗೆ ವಿಚಾರಣೆ ಮಾಡುತ್ತಿದ್ದಾಗ ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿ ಮೋಟಾರ್ ಬೈಕ್ ಸಮೇತ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಯಿತು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕವಲಂದೆ ಹೋಬಳಿಯ ಹೆಡತಲೆ ಗ್ರಾಮದ ಎಚ್.ಬಿ.ಗಿರೀಶ್ ಕುಮಾರ್ (29) ಎಂಬವರನ್ನು ಬಂಧಿಸಲಾಯಿತು. ಮತ್ತೋರ್ವ ಬೆಳಗಾಂ ಜಿಲ್ಲೆಯ ರಾಜೇಶ್ ಎಂಬವನು ತಲೆಮರೆಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು.
ಬೆಳಗಾಂ ಮೂಲದ ರಾಜೇಶ ಎಂಬಾತನೊಂದಿಗೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಸ್ಥಳಗಳಲ್ಲಿ ಮನೆ ಖನ್ನ ಕಳವು, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರು ಹಾಸನ ಜಿಲ್ಲೆಯ ಅರಸೀಕೆರೆ-2, ಜಾವಗಲ್-1, ನುಗ್ಗೇಹಳ್ಳಿ-1, ಹಳೇಬೀಡು-1, ದುದ್ದ-2, ಹಾಸನ ಬಡಾವಣೆ-4, ಹಾಸನ ನಗರ-1, ತುಮಕೂರು ಜಿಲ್ಲೆಯ ಕುಣಿಗಲ್-1, ಬೆಂಗಳೂರು ಗ್ರಾಮಾಂತರ ಜಿಲ್ಲಾ ತಾವರಕೆರೆ-1 ಸೇರಿ ಸುಮಾರು 14 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿನಂದಿನಿ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಮತ್ತಿತರರು ಉಪಸ್ಥಿತರಿದ್ದರು.







