ಫ್ರಾನ್ಸ್: ಸಂಸದೆಯನ್ನು ‘ಗುಲಾಮ’ ಎಂಬಂತೆ ಚಿತ್ರಿಸಿದ ಬಲಪಂಥೀಯ ಪತ್ರಿಕೆ
ದೇಶಾದ್ಯಂತ ಭಾರೀ ಆಕ್ರೋಶ

ಪ್ಯಾರಿಸ್ (ಫ್ರಾನ್ಸ್), ಆ. 30: ಫ್ರಾನ್ಸ್‌ನ ಓರ್ವ ಸಂಸತ್ ಸದಸ್ಯೆಯನ್ನು ದೇಶದ ಕಡು ಬಲಪಂಥೀಯ ಪತ್ರಿಕೆಯೊಂದು ಗುಲಾಮ ವ್ಯಕ್ತಿಯೆಂಬಂತೆ ಚಿತ್ರಿಸಿದ ಬಳಿಕ, ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ನಿಂದನೆಗೆ ಗುರಿಯಾಗಿರುವ ಸಂಸದೆ ಡೇನಿಯಲ್ ಒಬೊನೊ ಎಡಪಂಥೀಯ ಪಕ್ಷ ‘ಫ್ರಾನ್ಸ್ ಅನ್‌ಬೋವ್ಡ್’ನ ಸದಸ್ಯೆಯಾಗಿದ್ದಾರೆ.
ದೇಶದ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸದೆಗೆ ಫೋನ್ ಕರೆ ಮಾಡಿ ಮಾತನಾಡಿದ್ದಾರೆ ಹಾಗೂ ಯಾವುದೇ ರೀತಿಯ ಜನಾಂಗೀಯ ತಾರತಮ್ಯವನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ್ದಾರೆ.
ಬಲಪಂಥೀಯ ಮತ್ತು ಕಡು ಬಲಪಂಥೀಯರಿಗಾಗಿ ಪ್ರಕಟವಾಗುತ್ತಿರುವ ಪತ್ರಿಕೆ ‘ವ್ಯಾಲರ್ಸ್ ಆ್ಯಕ್ಚುವಲ್ಸ್’, ಒಬೊನೊ ಬಗ್ಗೆ ಏಳು ಪುಟಗಳ ಕಲ್ಪನಾತ್ಮಕ ಲೇಖನವೊಂದನ್ನು ಪ್ರಕಟಿಸಿದೆ. ಲೇಖನದಲ್ಲಿ ಸಂಸದೆಯನ್ನು ಸಂಕಲೆಯಲ್ಲಿ ಬಂಧಿಸಿಟ್ಟಿರುವಂತೆ ಹಾಗೂ ಕುತ್ತಿಗೆಗೆ ಕಬ್ಬಿಣದ ಕಾಲರ್ ಹಾಕಿರುವಂತೆ ತೋರಿಸಿದೆ.
‘‘ಇದೊಂದು ಆಕ್ರೋಶಕಾರಕ ಲೇಖನವಾಗಿದೆ ಹಾಗೂ ಅದನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಬೇಕಾಗಿದೆ’’ ಎಂದು ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಹೇಳಿದರು.
ತನ್ನ ಮೇಲಿನ ಲೇಖನಕ್ಕೆ ಒಬೊನೊ ಹೀಗೆ ಟ್ವೀಟ್ ಮಾಡಿದ್ದಾರೆ: ‘‘ಕಡು ಬಲಪಂಥ- ಅಸಹ್ಯ, ಮೂರ್ಖ ಮತ್ತು ಕ್ರೂರಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ವತಃ ಅದರಂತೆಯೇ’’.
ಆಫ್ರಿಕ ಮತ್ತು ಅರಬ್ ಮೂಲದ ರಾಜಕಾರಣಿಗಳ ವಿರುದ್ಧ ಹೆಚ್ಚುತ್ತಿರುವ ದ್ವೇಷ ಭಾಷಣಗಳ ಬಗ್ಗೆ ಜನಾಂಗೀಯ ತಾರತಮ್ಯ ವಿರೋಧಿ ಸಂಘಟನೆ ‘ಎಸ್‌ಒಎಸ್ ರೇಸಿಸಮ್’ ಕಳವಳ ವ್ಯಕ್ತಪಡಿಸಿದೆ ಹಾಗೂ ಇದನ್ನು ಎದುರಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಇಂಗಿತವನ್ನು ಅದು ವ್ಯಕ್ತಪಡಿಸಿದೆ.
ಆದರೆ, ತನ್ನ ಲೇಖನವನ್ನು ಸಮರ್ಥಿಸಿಕೊಂಡಿರುವ ಪತ್ರಿಕೆಯು, ಸಂಸದೆ ಒಬೊನೊಗೆ ಸಂಬಂಧಿಸಿದ ಲೇಖನವು ಕಲ್ಪನೆಯಾಗಿದೆ ಹಾಗೂ ಅದು ಕೆಟ್ಟದಾಗಿಯೇನೂ ಇಲ್ಲ ಎಂದಿದೆ.







