ಟ್ರಂಪ್‌ರಿಂದ ವೈಯಕ್ತಿಕ ದ್ವೇಷ ಸಾಧನೆಗಾಗಿ ಸೇನೆ ಬಳಕೆ: ಬೈಡನ್ ಆರೋಪ

ವಾಶಿಂಗ್ಟನ್, ಆ. 30: ತನ್ನ ವೈಯಕ್ತಿಕ ದ್ವೇಷ ಸಾಧನೆಗಾಗಿ ಮತ್ತು ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಸೇನೆಯನ್ನು ಬಳಸುತ್ತಿದ್ದಾರೆ ಎಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಶನಿವಾರ ಆರೋಪಿಸಿದ್ದಾರೆ.
ನಾನು ಅಧ್ಯಕ್ಷನಾದರೆ ಸೇನೆಯನ್ನು ನನ್ನ ಊರುಗೋಲಾಗಿ ಅಥವಾ ‘ಖಾಸಗಿ ಪಡೆ’ಯಾಗಿ ಯಾವತ್ತೂ ಬಳಸುವುದಿಲ್ಲ ಎಂದು ನ್ಯಾಶನಲ್ ಗಾರ್ಡ್ ಅಸೋಸಿಯೇಶನ್ ಆಫ್ ದ ಯುನೈಟೆಡ್ ಸ್ಟೇಟ್ಸ್‌ನ ಅಶರೀರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದರು. ನ್ಯಾಶನಲ್ ಗಾರ್ಡ್ ಅಮೆರಿಕದ ಭದ್ರತಾ ಪಡೆಯಾಗಿದೆ ಹಾಗೂ ನ್ಯಾಶನಲ್ ಗಾರ್ಡ್ ಅಸೋಸಿಯೇಶನ್ ಅದರ ಸಂಘಟನೆಯಾಗಿದೆ.
ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಚಲಾಯಿಸಿರುವುದಕ್ಕಾಗಿ ನಿಮ್ಮ ಸಹ ಪ್ರಜೆಗಳ ಮೇಲೆ ‘ಹಿಡಿತ ಸಾಧಿಸಲು’ ನಿಮ್ಮನ್ನು ನಿಯೋಜಿಸಬೇಕೆಂದು ಟ್ರಂಪ್ ಶಿಫಾರಸು ಮಾಡಿದ್ದಾರೆ ಎಂದು ಅವರು ಹೇಳಿದರು.
‘‘ನಾವು ಈ ಪರಿಸ್ಥಿತಿಗಿಂತ ತುಂಬಾ ಮೇಲ್ಮಟ್ಟದಲ್ಲಿದ್ದೇವೆ’’ ಎಂದು ಹೇಳಿದ ಬೈಡನ್, ‘‘ಇದಕ್ಕಿಂತ ತುಂಬಾ ಉತ್ತಮ ರೀತಿಯಲ್ಲಿ ವ್ಯವಹರಿಸುವ ಅರ್ಹತೆಯನ್ನು ನೀವು ಹೊಂದಿದ್ದೀರಿ’’ ಎಂದರು.
ಚುನಾವಣೆ ಪ್ರಕ್ರಿಯೆಯನ್ನು ನಡೆಸುವಲ್ಲಿ ಅಥವಾ ವಿವಾದಿತ ಮತವನ್ನು ಇತ್ಯರ್ಥಪಡಿಸುವಲ್ಲಿ ಸಶಸ್ತ್ರ ಪಡೆಗಳಿಗೆ ಯಾವುದೇ ಪಾತ್ರವಿಲ್ಲ ಎಂದು ಸೇನಾಪಡೆಗಳ ಜಂಟಿ ಮುಖ್ಯಸ್ಥ ಜನರಲ್ ಮಾರ್ಕ್ ಮಿಲಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ ಒಂದು ದಿನದ ಬಳಿಕ ಬೈಡನ್ ಈ ಹೇಳಿಕೆ ನೀಡಿದ್ದಾರೆ.