ಬಹರೈನ್ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಆಹಾರ ಕಿಟ್ ವಿತರಣೆ

ಪಡುಬಿದ್ರಿ : ಬಹರೈನ್ ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಕೋವಿಡ್-19 ಅಂಗವಾಗಿ ಸುಮಾರು 2500 ಅರ್ಹ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಣೆಗೆ ಕಾರ್ಯಕ್ರಮಕ್ಕೆ ರವಿವಾರ ಹೆಜಮಾಡಿಯಲ್ಲಿ ನಡೆಯಿತು.
ಕಳೆದ 28 ವರ್ಷಗಳಿಂದ ಭಾರತೀಯ ಕನ್ನಡಿಗರ ಏಳಿಗೆಗಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಹೆಜಮಾಡಿ ಅಬ್ದುಲ್ ರಝಾಕ್ ಕೋಟೆ ನೇತೃತ್ವದ ಈ ಸಂಸ್ಥೆಯು ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ ಶಿರೂರಿನಿಂದ ಉಜಿರೆವರೆಗೆ ಕಿಟ್ ವಿತರಿಸಲು ಮುಂದಾಗಿದೆ. ಹೆಜಮಾಡಿಯ ನ್ಯೂ ಕೋಟೆ ಹೌಸ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೆಜಮಾಡಿ ಹಾಗೂ ಆಸುಪಾಸಿನ ಸುಮಾರು 100 ಅರ್ಹ ಫಲಾನುಭವಿಗಳಿಗೆ ಅಸೋಸಿಯೇಶನ್‍ನಿಂದ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಮಾರಂಭದ ಮುಖ್ಯ ಅತಿಥಿ ಬಹರೈನ್ ಕರ್ನಾಟಕ ಎನ್‍ಆರ್‍ಐ ಫೋರಮ್ ಚೆಯರ್ಮ್ಯಾನ್ ಲೀಲಾಧರ ಬೈಕಂಪಾಡಿ, ನಾವೆಲ್ಲರೂ ಭಾರತೀಯರು ಎಂಬ ನಾಣ್ಣುಡಿಯಂತೆ ಅಸೋಸಿಯೇಶನ್ ಕಳೆದ 28 ವರ್ಷಗಳಿಂದ ಬಹರೈನ್ ನಲ್ಲಿ ಭಾರತೀಯರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಜಾತಿ ಮತ ಧರ್ಮ ಮರೆತು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಕಾರ್ಯವೈಖರಿ ಮಾದರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಉಮರ್ ಬ್ರಹ್ಮಾವರ, ಈ ಬಾರಿ ಅಸೋಸಿಯೇಶನ್ ವತಿಯಿಂದ ಕೋವಿಡ್-19 ಹಿನ್ನೆಲೆಯಲ್ಲಿ ಅವಿಭಜಿತ ಜಿಲ್ಲೆಯಾದ್ಯಂತ ಸುಮಾರು 2500 ಆಹಾರ ಕಿಟ್ ವಿತರಣೆಗೆ ನಿರ್ಧರಿಸಲಾಗಿದ್ದು, ಹೆಜಮಾಡಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಹೆಜಮಾಡಿ ಮಸೀದಿಯ ಹುಸೈನ್ ಮುಸ್ಲಿಯಾರ್ ದುವಾ ಪ್ರಾರ್ಥನೆ ನೆರವೇರಿಸಿದರು. ಅಸೋಸಿಯೇಶನ್ ಕಾರ್ಯಕ್ರಮ ನಿರ್ವಾಹಕ ಮುಬಾರಕ್, ತಾರಾನಾಥ್ ಹೆಜಮಾಡಿ, ಹಾತಿಮ್, ಸೈಯದ್ ಕೋಟೆಹೌಸ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್, ಸುಧೀರ್ ಕರ್ಕೇರ ಮುಖ್ಯ ಅತಿಥಿಗಳಾಗಿದ್ದರು. ಶೇಖಬ್ಬ ಕೋಟೆ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಹಂಝ ಹೆಜಮಾಡಿ ವಂದಿಸಿದರು.







