ಚಿಕ್ಕಮಗಳೂರು: ಪ್ರವಾಸಿಗರಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಜಿಲ್ಲಾಡಳಿತ

ಚಿಕ್ಕಮಗಳೂರು, ಆ.30: ಕೋವಿಡ್-19 ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಿ ಪ್ರವಾಸಿ ತಾಣಗಳಿಗೆ ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರವಾಸಿಗರಿಗೆ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಗುಂಪು ಗೂಡಬಾರದು ಮತ್ತು ಸಣ್ಣ ವಾಹನಗಳಲ್ಲಿ ಅಥವಾ ಸ್ವಂತ ವಾಹನದಲ್ಲಿ ಬರಬೇಕು. ಸ್ಯಾನಿಟೈಸ್, ಮಾಸ್ಕ್ ಬಳಕೆ ಮಾಡಬೇಕು. ಪ್ರವಾಸಿ ತಾಣಗಳಲ್ಲೂ ಸುರಕ್ಷಿತ ಅಂತರ ಕಾಪಾಡಿಕೊಂಡು ಪ್ರವಾಸಿತಾಣಗಳ ವೀಕ್ಷಣೆ ಮಾಡಬೇಕೆಂಬ ಷರತ್ತಿನೊಂದಿಗೆ ಜಿಲ್ಲಾಡಳಿತ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿ ಶನಿವಾರ ಆದೇಶ ಹೊರಡಿಸಿದೆ.
ಪ್ರವಾಸಿ ತಾಣಗಳಲ್ಲಿ ಉಗುಳುವುದು, ತಾವು ಬಳಸಿದ ತಿಂಡಿ ತಿನಿಸು ಇತರ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಹೋಮ್ ಸ್ಟೇ, ಹೊಟೇಲ್, ರೆಸಾರ್ಟ್‍ಗಳಲ್ಲಿ ಗುಂಪಾಗಿ ತಂಗಬಾರದು, ಪ್ರತೀ ಪ್ರವಾಸಿಗರನ್ನು ಸ್ಕ್ರೀನಿಂಗ್ ಮಾಡಿದ ನಂತರವೇ ಪ್ರವಾಸಿ ತಾಣಗಳಲ್ಲಿ ತಂಗಲು ಅವಕಾಶ ನೀಡಬೇಕು. ವಸತಿ ಗೃಹಗಳಲ್ಲಿ ಸ್ಯಾನಿಟೈಸರ್, ಮಾಸ್ಕ್ ಬಳಸಿ ಸುರಕ್ಷಿತ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
ಪ್ರವಾಸಿತಾಣಗಳಿಗೆ ಭೇಟಿ ನೀಡುವ ಯಾವುದೇ ವ್ಯಕ್ತಿಯಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದರೇ ತಕ್ಷಣ ಆ ವ್ಯಾಪ್ತಿಯ ಸರಕಾರಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ತಿಳಿಸಬೇಕು. ಪ್ರವಾಸಿ ತಾಣಗಳ ವ್ಯಾಪ್ತಿಯ ಗ್ರಾಮ ಪಂಚಾಯತ್, ಪುರಸಭೆ ಅಥವಾ ನಗರಸಭೆಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು ಜಿಲ್ಲಾಡಳಿತ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲೂ ಕೋವಿಡ್ ನಿರ್ಬಂಧಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಆದೇಶದಲ್ಲಿ ಹೇಳಿದೆ.







