35ನೇ ಮಾಸ್ಟರ್ಸ್ ಜಯಿಸಿದ ಜೊಕೊವಿಕ್

ನ್ಯೂಯಾರ್ಕ್,ಆ.30: ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್ ಟೆನಿಸ್ ಫೈನಲ್‌ನಲ್ಲಿ ಮಿಲೋಸ್ ರಾವೊನಿಕ್ ವಿರುದ್ಧ ಜಯಗಳಿಸುವ ಮೂಲಕ ನೊವಾಕ್ ಜೊಕೊವಿಕ್ ತಮ್ಮ ವೃತ್ತಿಜೀವನದ 35ನೇ ಮಾಸ್ಟರ್ಸ್ 1000 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್ ಫೈನಲ್ ಪಂದ್ಯದಲ್ಲಿ ಮಿಲೋಸ್ ರಾವೊನಿಕ್ ಅವರನ್ನು 1-6, 6-3, 6-4 ಸೆಟ್‌ಗಳಿಂದ ಮಣಿಸುವ ಮೂಲಕ ಜೊಕೊವಿಕ್ ತಮ್ಮ 35ನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇದರೊಂದಿಗೆ ರಾಫೆಲ್ ನಡಾಲ್ ದಾಖಲೆಯನ್ನು ಸರಿಗಟ್ಟಿದರು.
2016ರ ವಿಂಬಲ್ಡನ್ ರನ್ನರ್ ಅಪ್ ರಾವೊನಿಕ್ ವಿರುದ್ಧ 11-0 ಹೆಡ್ ಟು ಹೆಡ್ ದಾಖಲೆಯನ್ನು ಮುಂದುವರಿಸಿರುವ ಜೊಕೊವಿಕ್ ಯುಎಸ್ ಓಪನ್‌ನಲ್ಲಿ ಹಾಟ್ ಫೇವರಿಟ್ ಆಗಿದ್ದಾರೆ. ಮೊದಲ ಸೆಟ್‌ನಲ್ಲಿ ಜೊಕೊವಿಕ್ ಹಿನ್ನಡೆ ಅನುಭವಿಸಿದರು. ಆದರೆ ಜೊಕೊವಿಕ್ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಬಳಿಕ ಹಿಡಿತ ಸಡಿಲಗೊಳಿಸದೆ ಅವರು ರಾವೊನಿಕ್‌ಗೆ ಸೋಲುಣಿಸಿದರು. ಈ ಗೆಲುವಿನೊಂದಿಗೆ ಸೆರ್ಬಿಯಾದ 33 ಹರೆಯದ ಜೊಕೊವಿಕ್ ತನ್ನ ವೃತ್ತಿಜೀವನದ 80ನೇ ಮತ್ತು ಹಾರ್ಡ್‌ಕೋರ್ಟ್‌ನಲ್ಲಿ 61ನೇ ಪ್ರಶಸ್ತಿಯನ್ನು ಬಾಚಿಕೊಂಡರು. ಪುರುಷರ ಸಿಂಗಲ್ಸ್‌ನಲ್ಲಿ ಜಿಮ್ಮಿ ಕಾನರ್ಸ್ 109 ಪ್ರಶಸ್ತಿಗಳ ದಾಖಲೆಯನ್ನು ಹೊಂದಿದ್ದಾರೆ. ಅವರ ಬಳಿಕದ ಸ್ಥಾನದಲ್ಲಿ ಫೆಡರರ್, ಇವಾನ್ ಲೆಂಡ್ಲ್ ಮತ್ತು ನಡಾಲ್ ಇದ್ದಾರೆ.
ಜೊಕೊವಿಕ್ 2018ರಲ್ಲಿ ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್ ಜಯಿಸಿದ್ದರು. ಯುಎಸ್ ಓಪನ್ ಪಂದ್ಯಾವಳಿ ಸೋಮವಾರದಿಂದ ಪ್ರಾರಂಭವಾಗಲಿದೆ. ಇದರಲ್ಲಿ ಅವರು ತಮ್ಮ 18ನೇ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವ ಕನಸು ಕಾಣುತ್ತಿದ್ದಾರೆ.
ಅಝರೆಂಕಾಗೆ ಪ್ರಶಸ್ತಿ: ಹಿಂದಿನ ಶನಿವಾರ ವಿಕ್ಟೋರಿಯಾ ಅಝರೆಂಕಾ 2016 ರ ಬಳಿಕ ಮೊದಲ ಟೂರ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಎದುರಾಳಿ ನವೋಮಿ ಒಸಾಕಾ ಎಡ ಮಂಡಿರಜ್ಜು ಗಾಯದಿಂದಾಗಿ ಮಹಿಳೆಯರ ಫೈನಲ್‌ನಲ್ಲಿ ಹೊರಬರುವ ಮೂಲಕ ಅಝರೆಂಕಾ ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್ ಮಹಿಳೆಯರ ಟೆನಿಸ್ ಸಿಂಗಲ್ಸ್ ಪ್ರಶಸ್ತಿಯನ್ನು ಬಾಚಿಕೊಂಡರು.







