ಕಾರು ಅಪಘಾತ ಪ್ರಕರಣ: ನಟಿ ಶರ್ಮಿಳಾ ಮಾಂಡ್ರೆಗೆ ಕ್ಲೀನ್ ಚಿಟ್

ಬೆಂಗಳೂರು, ಆ. 30: ಲಾಕ್‍ಡೌನ್ ಸಂದರ್ಭದಲ್ಲಿ ನಟಿ, ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಜಾಲಿರೈಡ್ ಹೋಗಿ ಕಾರು ಅಪಘಾತ ಮಾಡಿದ ಪ್ರಕರಣದಲ್ಲಿ ಪೊಲೀಸರು ನಗರದ 4ನೆ ಎಸಿಎಂಎಂ ಟ್ರಾಫಿಕ್ ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್‍ಶೀಟ್‍ನಲ್ಲಿ ಮಾಂಡ್ರೆ ಆರೋಪಿ ಅಲ್ಲ ಎಂದು ತಿಳಿಸಿ ಪ್ರಕರಣದಿಂದ ಕೈಬಿಟ್ಟಿದ್ದಾರೆ.
32 ಪುಟಗಳ ಚಾರ್ಜ್ ಶೀಟ್‍ನಲ್ಲಿ, ಕಾರು ಚಲಾಯಿಸುತ್ತಿದ್ದ ಡಾನ್ ಥಾಮಸ್ ಆರೋಪಿ. ಚಾಲನೆ ಸರಿಯಾಗಿ ಬರದಿದ್ದರೂ ಅತೀವೇಗವಾಗಿ ಚಾಲನೆ ಮಾಡಿದ್ದು, ಅಪಘಾತಕ್ಕೆ ಕಾರಣವಾಗಿದೆ ಎಂದು ಹೈಗ್ರೌಂಡ್ಸ್ ಸಂಚಾರ ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ನಮೂದಿಸಿದ್ದಾರೆ.ಕಾರಿನಲ್ಲಿದ್ದ ಶಿಫಾ ಜೋಹರ್, ಲೋಕೇಶ್ ಕುಮಾರ್, ನಿಖಿಲ್ ಮತ್ತು ಶರ್ಮಿಳಾ ಮಾಂಡ್ರೆಯನ್ನು ಪ್ರಕರಣದಿಂದ ಪೊಲೀಸರು ಕೈಬಿಟ್ಟಿದ್ದಾರೆ.
ಎಪ್ರಿಲ್ 4ರಂದು ಬೆಳಗಿನ ಜಾವ ವಸಂತನಗರದ ಅಂಡರ್ ಬ್ರಿಡ್ಜ್ ಬಳಿ ಶರ್ಮಿಳಾ ಮಾಂಡ್ರೆ ಹಾಗೂ ಅವರ ಸ್ನೇಹಿತರಿದ್ದ ಜಾಗ್ವಾರ್ ಕಾರು ಅಪಘಾತಕ್ಕೀಡಾಗಿತ್ತು. ಕಾರನ್ನ ಸ್ಥಳದಲ್ಲೇ ಬಿಟ್ಟು ಬೆಳಗ್ಗೆ 3 ಗಂಟೆ ವೇಳೆಗೆ ಗಾಯಾಳುಗಳು ಪೋರ್ಟಿಸ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಹೈಗ್ರೌಂಡ್ಸ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.





