ಪರಿಷ್ಕೃತ 'ಮಹಿಷಿ ವರದಿ'ಗೆ ಕಾಯ್ದೆ ರೂಪಿಸಲು ಆಗ್ರಹಿಸಿ ಸೆ.1ರಂದು ಪತ್ರ ಚಳವಳಿ
ಬೆಂಗಳೂರು, ಆ. 30: ಪರಿಷ್ಕೃತ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಿ ಕಾಯ್ದೆ ರೂಪಿಸಲು ಒತ್ತಾಯಿಸಿ ಸೆ.1ರಂದು ಕನ್ನಡ ಗೆಳೆಯರ ಬಳಗ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಪತ್ರ ಚಳವಳಿಯನ್ನು ಹಮ್ಮಿಕೊಂಡಿವೆ.
ರಾಜ್ಯದಲ್ಲಿರುವ ಕೇಂದ್ರ ಮತ್ತು ಖಾಸಗಿ ಉದ್ದಿಮೆ, ಸಂಸ್ಥೆ, ಬ್ಯಾಂಕ್, ಕೈಗಾರಿಕೆ ಹಾಗೂ ಕಚೇರಿಗಳಲ್ಲಿ ನಿರಂತರವಾಗಿ ಉದ್ಯೋಗ ಸೃಷ್ಟಿಯಾಗುತ್ತಿರುತ್ತದೆ. ಅಲ್ಲಿನ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯುವ ಮೂಲಕ ಕನ್ನಡಿಗರ ಉದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ ಪರಿಷ್ಕೃತ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಿ ಕಾಯ್ದೆ ರೂಪಿಸಬೇಕಾಗಿದೆ.
ಐಟಿ-ಬಿಟಿ ಸೇರಿದಂತೆ ಎಲ್ಲ ಹೊಸ ಕ್ಷೇತ್ರಗಳನ್ನು ಪರಿಗಣಿಸಿ ಪರಿಷ್ಕೃತ ಮಹಿಷಿ ವರದಿಯನ್ನು 2017ರಲ್ಲಿ ಅಂದಿನ ಸಿಎಂಗೆ ನೀಡಲಾಗಿತ್ತು. ಪರಿಷ್ಕೃತ ವರದಿಯನ್ನು ಸಲ್ಲಿಸಿ 3ವರ್ಷಗಳ ನಂತರವೂ ಅನುಷ್ಟಾನಗೊಳಿಸಲು ಅಗತ್ಯವಾದ ಕಾನೂನು ಪ್ರಕ್ರಿಯೆಯೇ ಆರಂಭವಾಗಿಲ್ಲ. ಹೀಗಾಗಿ ಕನ್ನಡಿಗರಿಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ.
ಪರಿಷ್ಕೃತ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಿ ಕಾನೂನು ಬಲ ನೀಡುವಂತೆ ಸಿಎಂ ಯಡಿಯೂರಪ್ಪರಿಗೆ ಒತ್ತಾಯಿಸಿ ಕನ್ನಡ ಗೆಳೆಯರ ಬಳಗ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ, ಕೇಂದ್ರೀಯ ಸದನ ಕನ್ನಡ ಸಂಘ, ಕರ್ನಾಟಕ ಕಾರ್ಮಿಕ ಲೋಕ, ಕರ್ನಾಟಕ ವಿಕಾಸ ರಂಗ, ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಮತ್ತು ಕರ್ನಾಟಕ ಮುಸ್ಲಿಮ್ ಕನ್ನಡ ಸಂಘಗಳ ನೇತೃತ್ವದಲ್ಲಿ ಸೆ.1ಕ್ಕೆ ಪತ್ರ ಚಳವಳಿ ಆರಂಭಿಸುತ್ತಿವೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







