ಅತ್ಯಾಧುನಿಕ ಜೆ-20 ಯುದ್ಧ ವಿಮಾನಗಳನ್ನು ಲಡಾಖ್ ಸಮೀಪ ನಿಯೋಜಿಸಿದ ಚೀನಾ

ಹೊಸದಿಲ್ಲಿ: ಚೀನಾದ ಸೇನೆ ಪಂಗ್ಯೊಂಗ್ ತ್ಸೊ ಸರೋವರದ ದಕ್ಷಿಣ ದಂಡೆಯ ಸಮೀಪ ಆಗಸ್ಟ್ 29-30ರ ರಾತ್ರಿ ಮತ್ತೆ ಅತಿಕ್ರಮಣ ನಡೆಸಲು ಯತ್ನಿಸಿತ್ತು. ಇದಕ್ಕಿಂತ ಕೆಲವೇ ದಿನಗಳ ಹಿಂದೆ ಚೀನಾ ತನ್ನ ಅತ್ಯಾಧುನಿಕ ಜೆ-20 ಫಿಫ್ತ್ ಜನರೇಶನ್ ಯುದ್ಧ ವಿಮಾನಗಳನ್ನು ಲಡಾಖ್ ಸಮೀಪ ನಿಯೋಜಿಸಿತ್ತು ಹಾಗೂ ಈ ಯುದ್ಧವಿಮಾನಗಳು ಈಗಲೂ ಆ ಸ್ಥಳದಲ್ಲಿ ಹಾರಾಟ ನಡೆಸುತ್ತಿವೆ ಎಂದು ವರದಿಯಾಗಿದೆ.
ಆಗಸ್ಟ್ 29 ಹಾಗೂ 30ರ ನಡುವಿನ ರಾತ್ರಿ ಚೀನಾದ ಸೇನಾ ಪಡೆಗಳ ಶಂಕಾಸ್ಪದ ಚಲನವಲನಗಳನ್ನು ಗಮನಿಸಿದ ಭಾರತೀಯ ಸೇನೆ ಲಡಾಖ್‍ನ ಚುಶುಲ್ ಪ್ರದೇಶದ ಪೂರ್ವಕ್ಕಿರುವ ದಕ್ಷಿಣ ಪಂಗ್ಯೊಂಗ್ ತ್ಸೊ ಸಮೀಪ ಚೀನಾ ಸೈನಿಕರ ಅತಿಕ್ರಮಣ ಯತ್ನವನ್ನು ತಡೆದಿತ್ತು.
“ಜೆ-20 ಯುದ್ಧ ವಿಮಾನಗಳನ್ನು ಚೀನಾದ ಸೇನೆ ಹೋಟನ್ ವಾಯು ನೆಲೆ ಸಮೀಪ ಹಾರಾಟ ನಡೆಸಿತ್ತು ಹಾಗೂ ಅವುಗಳು ಲಡಾಖ್ ಮತ್ತು ಹತ್ತಿರದ ಭಾರತದ ಭೂಭಾಗಗಳ ಸಮೀಪದಿಂದ ಹಾರಾಟ ನಡೆಸಿವೆ'' ಎಂದು ಸರಕಾರಿ ಮೂಲಗಳು ತಿಳಿಸಿವೆ.
ಅತ್ಯಾಧುನಿಕ ಯುದ್ಧ ವಿಮಾನ ರಫೇಲ್ ಭಾರತದ ವಾಯುಪಡೆಯ ಭಾಗವಾದ ನಂತರ ಚೀನಾ ಇಂತಹ ಕ್ರಮ ಕೈಗೊಂಡಿದೆ ಎಂದೂ ಮೂಲಗಳು ತಿಳಿಸಿವೆ.
ಚೀನಾದ ಜೆ-20 ಯುದ್ಧ ವಿಮಾನ ಹಾಗೂ ಇತರ ವಿಮಾನಗಳು ಲಡಾಖ್ ಗೆ ಸಮೀಪದ ವಿವಿಧ ವಾಯುನೆಲೆಗಳಿಂದ ಮುಖ್ಯವಾಗಿ ಹೋಟನ್ ಹಾಗೂ ಗರ್ ಗುನ್ಸಾ ವಾಯು ನೆಲೆಯಿಂದ ಹಾರಾಟ ನಡೆಸುತ್ತಿವೆಯೆನ್ನಲಾಗಿದೆ.







