ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಜಿ.ಮೋಹನ್ ದಾಸ್ ನಿಧನ

ಉಡುಪಿ, ಆ.31: ಕೊಲ್ಲಿ ರಾಷ್ಟ್ರದಲ್ಲಿ ಕನ್ನಡ ಭಾಷೆಗಾಗಿ ಶ್ರಮಿಸಿದ ಹಾಗೂ ಕಳೆದ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಬೀಜಿ’ ಎಂದೇ ಖ್ಯಾತರಾಗಿರುವ ಬಿಜೂರು ಗೋವಿಂದಪ್ಪ ಮೋಹನ್ ದಾಸ್ (70) ಸೋಮವಾರ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಕಳೆದ ಒಂದು ತಿಂಗಳಿನಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಯಶೋದಾ, ಪುತ್ರ ಅಖಿಲ್ ಹಾಗೂ ಪುತ್ರಿ ಯಶಸ್ವಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮಣಿಪಾಲದ ಫಾರ್ಮಸಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ನಂತರ ಅದೇ ವಿಭಾಗದ ಸಹಾಯಕ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು. 80ರ ದಶಕದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ವಲಸೆ ಹೋದ ಇವರು, ಅಲ್ಲಿ ಫಾರ್ಮಸಿಯ ವಿವಿಧ ಸಂಸ್ಥೆಗಳಲ್ಲಿ ಕಳೆದ 35 ವರ್ಷಗಳ ಕಾಲ ದುಡಿದಿದ್ದರು.
ಸಮಾಜ ಸೇವೆಗಾಗಿ ಸಂಘದ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಇವರು, ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಯುಎಇ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು. ಇವರ ಸೇವೆಯನ್ನು ಪರಿಗಣಿಸಿ ಶಾರ್ಜಾ ಕರ್ನಾಟಕ ಸಂಘ 2007ರಲ್ಲಿ ಪ್ರತಿಷ್ಠಿತ ಮಯೂರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಗಲ್ಫ್ ನಾಡಿನಲ್ಲಿ ಕನ್ನಡ ಅರಳಲು ಸಹಕಾರಿಯಾಗಿದ್ದ ಇವರಿಗೆ ಹತ್ತಾರು ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಕಾಂತಾವರ ಕನ್ನಡ ಸಂಘವು ಇವರ ಕುರಿತ ‘ಗಲ್ಫ್ ಕನ್ನಡಿಗ-ಬಿ.ಜಿ.ಮೋಹನ್ ದಾಸ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದೆ. 2014ರಲ್ಲಿ ಊರಿಗೆ ವಾಪಾಸ್ ಬಂದು ತಮ್ಮ ಕುಟುಂಬದೊಂದಿಗೆ ಮಣಿಪಾಲದಲ್ಲಿ ನೆಲೆಸಿದ್ದರು. ಮಣಿಪಾಲ ಲಯನ್ಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.







