ಉಡುಪಿ ಶ್ರೀಕೃಷ್ಣ ಮಠದಿಂದ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ವಿಟ್ಲಪಿಂಡಿ ಆಚರಣೆ: ಅದಮಾರು ಸ್ವಾಮೀಜಿ

ಉಡುಪಿ, ಆ.31: ಕೋವಿಡ್-19ರ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠ ದಲ್ಲಿ ಸೆ.11ರಂದು ನಡೆಯಲಿರುವ ವಿಟ್ಲಪಿಂಡಿ ಹಬ್ಬನ್ನು ಜಿಲ್ಲಾಡಳಿತದ ಮಾರ್ಗದರ್ಶನದಂತೆ ಆಚರಿಸಲು ನಿರ್ಧರಿಸಲಾಗಿದೆ. ಆದರೆ ಸೆ.10ರ ರಾತ್ರಿ ಮಠದೊಳಗೆ ನಡೆಯುವ ಅರ್ಘ್ಯ ಪ್ರದಾನ ಸೇರಿದಂತೆ ಪೂಜಾ ವಿಧಿವಿಧಾನ ಗಳು ಯಥಾವತ್ತಾಗಿ ನಡೆಯಲಿವೆ ಎಂದು ಪರ್ಯಾಯ ಅದಮಾರು ಮಠಾ ಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಸಾರ್ವಜನಿಕರ ಆರೋಗ್ಯ ಬಹಳ ಮುಖ್ಯವಾಗಿದೆ. ಮುಂದೆ ಸಮಾಜ ವಿಟ್ಲಪಿಂಡಿ ಕಾರಣದಿಂದ ರೋಗ ಹರಡಿತು ಎಂದು ಹೇಳಿಕೊಳ್ಳ ಬಾರದು. ಆ ವಿಚಾರವಾಗಿ ನಾವು ಜಾಗೃತೆ ವಹಿಸಬೇಕಾ ಗಿದೆ. ಆದುದರಿಂದ ಈ ಕುರಿತು ಜಿಲ್ಲಾಡಳಿತದ ಮಾಗದರ್ರ್ಶನ ಪಡೆಯಲಿದ್ದೇವೆ ಎಂದರು.
ಹಿಂದಿನಿಂದ ಮಾಡಿಕೊಂಡು ಬಂದ ಸಂಪ್ರದಾಯದಂತೆ ಮೊಸರು ಕುಡಿಕೆ ಯನ್ನು ಮಾಡುತ್ತೇವೆ. ಇದನ್ನು ಸೀಮಿತ ಮಂದಿ ಸುರಕ್ಷಿತ ಅಂತರ ಕಾಪಾಡಿ ಕೊಂಡು ಮಾಡುವುದಕ್ಕೆ ಯಾವುದೇ ಸಮಸ್ಯೆ ಆಗಲ್ಲ. ಅದೇ ರೀತಿ ಭಕ್ತರ ಭಾವನೆಗೆ ತೊಂದರೆ ಮಾಡಬಾರದು ಎಂಬುದು ನಮ್ಮ ಆಶಯವಾಗಿದೆ. ಹೀಗೆ ನಾವು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದೇವೆ. ಜಿಲ್ಲಾಡಳಿತ ಯಾವ ತೀರ್ಮಾನ ತೆಗೆದು ಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಅವರು ಹೇಳಿದರು.
ಸೆ.10ರ ರಾತ್ರಿ ಕೃಷ್ಣ ಮಠದಲ್ಲಿ ನಡೆಯುವ ಕೃಷ್ಣ ಜಯಂತಿಯ ಮಹಾಪೂಜೆ, ಮಧ್ಯರಾತ್ರಿ 12:16ಕ್ಕೆ ನಡೆಯುವ ಕೃಷ್ಣಾರ್ಘ್ಯ ಪ್ರದಾನವನ್ನು ಆನ್‌ಲೈನ್‌ನಲ್ಲಿ ಬಿತ್ತರಿಸಲಾಗುವುದು. ಭಕ್ತರು ಮನೆಯಲ್ಲೇ ಕುಳಿತು ಇದನ್ನು ವೀಕ್ಷಿಸಬಹುದು. ಮಕ್ಕಳ ಆರೋಗ್ಯದ ದೃಷ್ಠಿಯಿಂದ ಮುದ್ದು ಕೃಷ್ಣ ಸ್ಪರ್ಧೆ ಈ ಸಂದರ್ಭದ ಬದಲು ಎಲ್ಲ ಸಮಸ್ಯೆ ದೂರ ಆದ ನಂತರ ಮುಂದೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
‘ಸದ್ಯಕ್ಕೆ ಶ್ರೀಕೃಷ್ಣ ಮಠ ತೆರೆಯಲ್ಲ’
ಕೋವಿಡ್-19 ಕಾರಣಕ್ಕಾಗಿ ಶ್ರೀಕೃಷ್ಣ ಮಠಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿರುವುದನ್ನು ತೆರವುಗೊಳಿಸಬೇಕೆಂಬ ಅಭಿಪ್ರಾಯ ಈ ಹಿಂದೆ ವ್ಯಕ್ತ ವಾಗಿತ್ತು. ಆದರೆ ಅದೇ ಸಮಯದಲ್ಲಿ ಕೊರೋನ ಸಂಖ್ಯೆ ವಿಪರೀತ ಹೆಚ್ಚಾದ ಹಿನ್ನೆಲೆಯಲ್ಲಿ ಆ ನಿರ್ಧಾರವನ್ನು ಕೈಬಿಡಲಾಯಿತು. ಮಠದಲ್ಲಿ ಇತರ ದೇವಸ್ಥಾನ ಗಳಿಗಿಂತ ಬೇರೆಯೇ ರೀತಿಯ ಪರಂಪರೆ ಇದ್ದು, ಯತಿಗಳನ್ನು ಬಿಟ್ಟು ಬೇರೆ ಯಾರು ಕೂಡ ಪೂಜೆ ಮಾಡುವಂತಿಲ್ಲ. ಅಲ್ಲದೆ ಮಠದಲ್ಲಿರುವ ಒಬ್ಬ ಸಿಬ್ಬಂದಿಗೆ ಸೋಂಕು ಬಂದರೂ ಅದು ತುಂಬಾ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಎಲ್ಲ ಕಾರಣದಿಂದ ಸದ್ಯಕ್ಕೆ ಮಠವನ್ನು ಸಾರ್ವಜನಿಕರ ದರ್ಶನಕ್ಕೆ ತೆರೆಯುವುದಿಲ್ಲ ಎಂದು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ತಿಳಿಸಿದರು.







