ಪಾಚಿ ಹಿಡಿದು ಪ್ರಾಚೀನ ಕಟ್ಟಡದಂತಾಗಿದೆ ಬೆಳಗಾವಿಯ ಸುವರ್ಣ ವಿಧಾನಸೌಧ
ಅಕ್ಷರಶಃ ನಿರುಪಯುಕ್ತವಾದ ಆಡಳಿತದ ಶಕ್ತಿ ಕೇಂದ್ರ

ಬೆಳಗಾವಿ, ಆ. 31: ಜಿಲ್ಲೆಯಲ್ಲಿನ ಸುವರ್ಣ ವಿಧಾನಸೌಧ ಕಟ್ಟಡ ಎಡಬಿಡದೆ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಪಾಚಿ ಕಟ್ಟಿದ್ದು, ಇಡೀ ಕಟ್ಟಡ ಇದೀಗ ಹಸಿರು ಮತ್ತು ಕಂದು ಬಣ್ಣಕ್ಕೆ ತಿರುಗಿದೆ. ಜಿಲ್ಲಾಡಳಿತ ಸೂಕ್ತ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ.
ಗಡಿ ಜಿಲ್ಲೆಯಲ್ಲಿರುವ ಆಡಳಿತದ ಶಕ್ತಿಕೇಂದ್ರ ಸುವರ್ಣ ವಿಧಾನಸೌಧದ ಕಂಬಗಳು, ಹೊರಗಿನ ಗೋಡೆಗಳಲ್ಲಿ ಹಸಿರು ಮತ್ತು ಕಂದು ಬಣ್ಣ ಮಿಶ್ರಿತ ಪಾಚಿ ಕಟ್ಟಿಕೊಂಡಿದ್ದು, ತನ್ನ ಸಹಜ ಸೌಂದರ್ಯ ಸಂಪೂರ್ಣ ಕಳೆದುಕೊಂಡಿದೆ. ಸೂಕ್ತ ನಿರ್ವಹಣೆ ಇಲ್ಲದೆ ಅತ್ಯಂತ ಪುರಾತನ ಪ್ರಾಚೀನ ಕಟ್ಟಡದಂತೆ ಗೋಚರಿಸುತ್ತಿದೆ.
2007ರಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣಕ್ಕೆ 238 ಕೋಟಿ ರೂ.ವೆಚ್ಚದ ಯೋಜನಾ ವರದಿ ಸಿದ್ದಪಡಿಸಿದ್ದು, 2012ರಲ್ಲಿ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಇದೀಗ ಅಕ್ಷರಶಃ ನಿರುಪಯುಕ್ತವಾಗಿದೆ. ವರ್ಷಕ್ಕೊಮ್ಮೆ ಹತ್ತು ದಿನಗಳ ವಿಧಾನ ಮಂಡಲ ಅಧಿವೇಶನ ನಡೆಸಲಾಗುತ್ತಿತ್ತು. ಆದರೆ, ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಳೆದ ವರ್ಷ ಅಧಿವೇಶನವನ್ನು ನಡೆಸಲಿಲ್ಲ.
ಬೆಳಗಾವಿ ಜಿಲ್ಲಾಡಳಿತ ಮತ್ತು ಸಚಿವರು ಬೆಳಗಾವಿಗೆ ತೆರಳಿದ ಸಂದರ್ಭದಲ್ಲಿ ಪ್ರಗತಿ ಪರಿಶೀಲನಾ ಸಭೆ, ಕೆಲ ಕಾರ್ಯಾಗಾರ, ವಿಚಾರ ಸಂಕಿರಣ ನಡೆಸುತ್ತಿರುವುದನ್ನು ಬಿಟ್ಟರೆ ಉಳಿದಂತೆ ಸುವರ್ಣ ಸೌಧದಲ್ಲಿ ಯಾವುದೇ ಕಾರ್ಯ ಚಟುವಟಿಕೆಗಳು ಇಲ್ಲ. ಮಾರಕ ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಕಟ್ಟಡ ನಿರ್ವಹಣೆಯತ್ತಲೂ ಅಧಿಕಾರಿಗಳು ಗಮನಹರಿಸಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಕಚೇರಿಗಳು ಸ್ಥಳಾಂತರಗೊಳ್ಳಬೇಕೆಂಬ ಬೆಳಗಾವಿ ಭಾಗದ ಜನರ ಬೇಡಿಕೆ ಈಡೇರಿಲ್ಲ. ಅಲ್ಲದೆ, ಕನಿಷ್ಠ ಸುವರ್ಣ ಸೌಧ ಕಟ್ಟಡ ಸ್ವಚ್ಚತೆಯನ್ನು ಕಾಪಾಡಲು ಅಧಿಕಾರಿಗಳು ಆಸಕ್ತಿ ವಹಿಸದಿರುವುದು ನಿರ್ಲಕ್ಷ್ಯತೆ ಮತ್ತು ಬೇಜಾಬ್ದಾರಿಗೆ ಕನ್ನಡಿ ಹಿಡಿದಿದೆ. ಹೀಗಾಗಿ ಈ ಬಗ್ಗೆ ಸ್ಪೀಕರ್ ಅವರು ಆಸ್ಥೆ ವಹಿಸಬೇಕು ಎಂದು ಆ ಭಾಗದ ಜನರು ಮನವಿ ಮಾಡಿದ್ದಾರೆ.
ಎರಡನೆ ರಾಜಧಾನಿಯ ಆಡಳಿತದ ಶಕ್ತಿಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸುವರ್ಣ ಸೌಧ ಸಮುದ್ರದಲ್ಲಿ ಮುಳುಗೆದ್ದಿರುವ ದ್ವಾರಕ ಪಟ್ಟಣದಂತೆ ಕಾಣುತ್ತಿದೆ. ಇಡೀ ಕಟ್ಟಡ ಪಾಚಿ ಕಟ್ಟಿದ್ದು, ಹಸಿರು ಮತ್ತು ಕಂದು ಬಣ್ಣಕ್ಕೆ ತಿರುಗಿದೆ. ಜನರ ತೆರಿಗೆ ಹಣದಲ್ಲಿ ಸುವರ್ಣ ಸೌಧವನ್ನು ಯಾವ ಪುರುಷಾರ್ಥಕ್ಕೆ ಇಲ್ಲಿ ನಿರ್ಮಿಸಬೇಕಿತ್ತು. ಕೂಡಲೇ ಈ ಕಟ್ಟಡ ನಿರ್ವಹಣೆ ಮೇಲ್ತುವಾರಿ ಸಮಿತಿ ರಚಿಸಿ, ಇಲ್ಲಿ ಪ್ರಮುಖ ಕಚೇರಿ ಸ್ಥಳಾಂತರ ಮತ್ತು ಅಧಿವೇಶನ ನಡೆಸಲು ಕ್ರಮ ಕೈಗೊಳ್ಳಬೇಕು
-ಅಶೋಕ ಚಂದರಗಿ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ







