ರಾಜ್ಯ ಸರಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದ್ರೋಹ: ಮೊಯ್ದಿನಬ್ಬ ಆರೋಪ
ಉಡುಪಿ, ಆ.31: 2019-20ನೆ ಸಾಲಿನಲ್ಲಿ ಪದವಿ ಮತ್ತು ಉನ್ನತ ಶಿಕ್ಷಣ ಕ್ಕಾಗಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅರಿವು ಯೋಜನೆಯಡಿ ಉಡುಪಿ ಜಿಲ್ಲೆಯ 341 ವಿದ್ಯಾರ್ಥಿಗಳು ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು ನಿಗಮದಲ್ಲಿ ಮಂಜೂರಾತಿ ನೀಡಲಾಗಿದ್ದರೂ ಈವರೆಗೆ 341 ವಿದ್ಯಾರ್ಥಿಗಳಿಗೆ ಪಾವತಿಯಾಗಬೇಕಿದ್ದ 1.33ಕೋಟಿ ರೂ. ಮಂಜೂರಾದ ಸಾಲವನ್ನು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕಾಲೇಜುಗಳಿಗೆ ಬಿಡುಗಡೆ ಮಾಡದೆ ರಾಜ್ಯ ಸರಕಾರ ಮತ್ತು ನಿಗಮ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿ ಗಳಿಗೆ ದ್ರೋಹ ಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಪಿ. ಮೊಯ್ದಿನಬ್ಬ ಆರೋಪಿಸಿದ್ದಾರೆ.
ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ಹಾಗೂ ದ. ಕ. ಜಿಲ್ಲೆಯ ವಿದ್ಯಾರ್ಥಿಗಳ ಸಾಲದ ಹಣ ನಿಗಮ ಈಗಾಗಲೇ ಕಾಲೇಜು ಗಳಿಗೆ ಪಾವತಿ ಮಾಡಿದ್ದು ಉಡುಪಿ ಜಿಲ್ಲೆಯನ್ನು ಉದ್ದೇಶ ಪೂರ್ವಕವಾಗಿ ನಿಗಮ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಿರ್ಲಕ್ಷಿಸಿದೆ. ಕೂಡಲೇ ಮುಖ್ಯ ಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಜಿಲ್ಲೆಯ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.





