ಲಂಪಿಸ್ಕಿನ್ ರೋಗ ನಿಯಂತ್ರಣಕ್ಕೆ ಕ್ರಮ: ಸಚಿವ ಪ್ರಭು ಚೌಹಾಣ್

ಕಲಬುರ್ಗಿ, ಆ.31: ಪಶುಸಂಗೋಪನೆ ರೈತರ ಜೀವನಾಧಾರವಾಗಿದೆ. ಸದ್ಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾನುವಾರುಗಳಿಗೆ ಲಂಪಿಸ್ಕಿನ್ ರೋಗ ತಗಲಿದ್ದು, ಪಶುವೈದ್ಯಾಧಿಕಾರಿಗಳು ರೋಗ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಕಲಬುರ್ಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರವಾಹ, ಕೊರೋನದಿಂದ ರೈತರು ತತ್ತರಿಸಿದ್ದಾರೆ. ಹೊಸದಾಗಿ ಪ್ರಾರಂಭವಾಗಿರುವ ಲಂಪಿಸ್ಕಿನ್ ರೋಗ ಉಲ್ಭಣಿಸಿದರೆ ರೈತರ ಆರ್ಥಿಕ ಸ್ಥಿತಿ ಮತ್ತಷ್ಟು ಕುಸಿಯಲಿದೆ. ಪಶುವೈದ್ಯಾಧಿಕಾರಿಗಳು ಈ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಲಂಪಿಸ್ಕಿನ್ ರೋಗದಿಂದ ಬಳಲುತ್ತಿರುವ ಜಾನುವಾರುಗಳು ಆಹಾರ ಸೇವನೆಯನ್ನು ಸರಿಯಾಗಿ ಮಾಡುತ್ತಿಲ್ಲ. ಮೈಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಕಡಿಮೆ ಹಾಲನ್ನು ನೀಡುತ್ತಿವೆ. ಇದರಿಂದ, ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ವೈದ್ಯಾಧಿಕಾರಿಗಳ ಜೊತೆಗೆ ಮಾತನಾಡಿ, ಮಾಹಿತಿ ಪಡೆದಿದ್ದೇನೆ. ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಹೇಳಿದರು.
ಹೆಚ್ಚು ಪ್ರಕರಣಗಳಿರುವ ಗ್ರಾಮಗಳಲ್ಲಿ ಪಶು ಆರೋಗ್ಯ ಶಿಬಿರ ನಡೆಸಿ ರೋಗವನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತದೆ. ಜಾನುವಾರುಗಳಿಗೆ ಆರೋಗ್ಯದಲ್ಲಿ ಏರು ಪೇರಾದರೆ ಪಶು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ರೈತರಿಗೆ ಸಲಹೆ ನೀಡಿದ್ದಾರೆ.







