ಸೆ.1ರಿಂದ ಜಿಲ್ಲಾ ನ್ಯಾಯಾಲಯಗಳಲ್ಲಿ ಫಿಸಿಕಲ್ ಕಲಾಪ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು, ಆ.31: ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಸೆ.1ರಿಂದ ಶೇ. 75 ರಷ್ಟು ಕೋರ್ಟ್ ಗಳು ಕಾರ್ಯಾರಂಭಗೊಳ್ಳಲಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಚ್ರಾರ್ ಜನರಲ್ ಆದೇಶ ಹೊರಡಿಸಿದ್ದು, ಅದರಲ್ಲಿ, ರಾಜ್ಯದ ನ್ಯಾಯಾಲಯಗಳಲ್ಲಿ ಅದರಲ್ಲೂ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಫಿಸಿಕಲ್ ವಿಚಾರಣೆಗೆ ಅವಕಾಶವಿಲ್ಲ ಎಂಬ ತಪ್ಪು ಅಭಿಪ್ರಾಯ ಒಂದಷ್ಟು ವಕೀಲ ಸಮುದಾಯದಲ್ಲಿದೆ. ಆದರೆ ಕಾಲಕಾಲಕ್ಕೆ ಎಸ್‍ಓಪಿ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ್ದು, ಅದರಂತೆ ವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರು ಭೌತಿಕ ವಿಚಾರಣೆಗಳಲ್ಲಿ ಭಾಗಿಯಾಗಬಹುದಾಗಿದೆ. ಸಾಕ್ಷಿದಾರರ ವಿಚಾರಣೆಗೆ ಹಾಗೂ ಹೇಳಿಕೆ ದಾಖಲಿಸಿಕೊಳ್ಳಲು ಮಾತ್ರ ವಿಡಿಯೋ ಕಾನ್ಫರೆನ್ಸ್ ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಸೆ.1ರಿಂದ ರಾಜ್ಯಾದ್ಯಂತ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿ ಶೇ. 75 ರಷ್ಟು ನ್ಯಾಯಾಂಗ ಅಧಿಕಾರಿಗಳು ಪ್ರಕರಣಗಳನ್ನು ವಿಚಾರಣೆ ನಡೆಸಲಿದ್ದಾರೆ. ಎಓಪಿ ಮಾರ್ಗಸೂಚಿಗಳಂತೆ ವಿಚಾರಣಾ ನ್ಯಾಯಾಲಯಗಳಲ್ಲಿ ಪ್ರತಿ ದಿನ ತಲಾ 30 ಪ್ರಕರಣಗಳನ್ನು ವಿಚಾರಣೆಗೆ ನಿಗದಿಪಡಿಸಲಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದೆ.





