ಸೀಲ್ ಡೌನ್ ಪ್ರದೇಶದಲ್ಲಿ ಮನೆಗಳ್ಳತನ ಪ್ರಕರಣ: ಆರೋಪಿ ಬಂಧನ, 20 ಲಕ್ಷ ರೂ. ಮೌಲ್ಯದ ಸೊತ್ತು ವಶ

ಹಾಸನ, ಆ.31: ಹಿಂದೆ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರದೇಶ ಸೀಲ್‌ಡೌನ್ ಆಗಿರುವುದನ್ನು ಗಮನಿಸಿ ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಯಿಂದ 20 ಲಕ್ಷ ರೂ ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥ ಹಾಗೂ 20 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಆ.24ರಂದು ಅರಕಲಗೂಡು ತಾಲೂಕು ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಾನಗಲ್ ಗ್ರಾಮದ ನಿವಾಸಿ ಕುಶಕುಮಾರ್ ಎಂಬವರ ತಮ್ಮ ಲವಕುಶ ಎಂಬ ವ್ಯಕ್ತಿ ಕೊರೋನದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಮನೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಮನೆಯಲ್ಲಿದವರೆಲ್ಲ ಅವರ ಬೇರೆ ಮನೆಯಲ್ಲಿ ವಾಸವಾಗಿದ್ದರು. ಇದನ್ನು ಗಮನಿಸಿದ ಅದೇ ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಎಚ್.ಆರ್.ವೆಂಕಟೇಶ್ ಎಂಬ ವ್ಯಕ್ತಿ ಮನೆಗಳ್ಳತನ ಮಾಡಿ ಚಿನ್ನಾಭರಣ, ಬೆಳ್ಳಿ ಪದಾರ್ಥ ಹಾಗೂ ನಗದನ್ನು ದೋಚಿದ್ದ ಎಂದು ಎಸ್ಪಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿ ನಂದಿನಿ ಇತರರು ಉಪಸ್ಥಿತರಿದ್ದರು.





