ಫೇಸ್ ಬುಕ್ ಉದ್ಯೋಗಿಗಳಿಂದ ಪ್ರಧಾನಿಯ ನಿಂದನೆ: ಝುಕರ್‌ಬರ್ಗ್‌ಗೆ ರವಿಶಂಕರ್ ಪ್ರಸಾದ್ ಪತ್ರ

ಹೊಸದಿಲ್ಲಿ, ಸೆ.1: ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನ ಉದ್ಯೋಗಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಪುಟದ ಹಿರಿಯ ಸದಸ್ಯರನ್ನು ಅಧಿಕೃತವಾಗಿಯೇ ನಿಂದಿಸುತ್ತಿದ್ದಾರೆ. ಆದರೆ, ಕೆಲವು ಆಯ್ದ ಸೋರಿಕೆಯಿಂದ ವಿಭಿನ್ನ ವಾಸ್ತವವನ್ನು ಚಿತ್ರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ಸಚಿ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
‘ವದಂತಿ, ಗಾಳಿ ಸುದ್ದಿ, ವ್ಯಂಗ್ಯೋಕ್ತಿಗಳ ಮೂಲಕ ಭಾರತದ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ಖಂಡನೀಯ. ಅಂತಾರಾಷ್ಟ್ರೀಯ ಮಾಧ್ಯಮಗಳೊಂದಿಗೆ ಫೇಸ್‌ಬುಕ್‌ನ ಒಳಒಪ್ಪಂದದಿಂದ ಕೆಲವು ದ್ವೇಷಭಾವನೆಯ ಸ್ಥಾಪಿತ ಹಿತಾಸಕ್ತಿಗಳಿಗೆ ನಮ್ಮ ಮಹಾನ್ ಪ್ರಜಾಪ್ರಭುತ್ವದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಹೆಸರು ಕೆಡಿಸಲು ಮುಕ್ತ ಅವಕಾಶ ದೊರಕಿದೆ’ ಎಂದು ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ಗೆ ಬರೆದಿರುವ ಪತ್ರದಲ್ಲಿ ಪ್ರಸಾದ್ ಉಲ್ಲೇಖಿಸಿದ್ದಾರೆ.
“ಈಗ ಮುನ್ನೆಲೆಗೆ ಬಂದಿರುವ ಅನಾಮಧೇಯ, ಮೂಲಗಳನ್ನು ಆಧರಿಸಿ ಎಂದು ಹೇಳಿರುವ ವರದಿಗಳ ಮಹಾಪೂರ , ಸೈದ್ಧಾಂತಿಕ ಪ್ರಾಬಲ್ಯ ಸಾಧಿಸಲು ನಿಮ್ಮ ಸಂಸ್ಥೆಯೊಳಗೆ ನಡೆಯುತ್ತಿರುವ ಅಧಿಕಾರಕ್ಕಾಗಿನ ಹೋರಾಟವಲ್ಲದೆ ಬೇರೇನೂ ಅಲ್ಲ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಲಪಂಥೀಯ ಮತ್ತು ಕೇಂದ್ರದ ವಿಚಾರಧಾರೆಯನ್ನು ಬೆಂಬಲಿಸುವವರ ಪರವಾಗಿ ಫೇಸ್‌ಬುಕ್ ಇಂಡಿಯಾ ಆಡಳಿತ ಕಾರ್ಯನಿರ್ವಹಿಸಿದೆ ಎಂಬ ವರದಿಯನ್ನು ನನ್ನ ಗಮನಕ್ಕೆ ತರಲಾಗಿದೆ. ಪಕ್ಷಪಾತ ಮತ್ತು ನಿಷ್ಕ್ರಿಯತೆ ಎಂಬ ಕಪೋಲಕಲ್ಪಿತ ಪ್ರಕರಣವು, ನಿಮ್ಮ ಫೇಸ್‌ಬುಕ್ ಇಂಡಿಯಾದ ತಂಡದಲ್ಲಿರುವ ಪ್ರಬಲ ರಾಜಕೀಯ ನಂಬಿಕೆಗಳ ನೇರ ಫಲಿತಾಂಶವಾಗಿದೆ” ಎಂದು ರವಿಶಂಕರ್ ಪ್ರಸಾದ್ ಬರೆದಿದ್ದಾರೆ.
“ತಪ್ಪಿನಿಂದ ಕೂಡಿದ ಮಾಹಿತಿಯಿಂದ ಬಳಕೆದಾರರನ್ನು ರಕ್ಷಿಸುವ ಜವಾಬ್ದಾರಿಯಿಂದ ತನ್ನನ್ನು ಸ್ವಯಂ ಮುಕ್ತಗೊಳಿಸಿರುವ ಫೇಸ್‌ಬುಕ್, ಬದಲಿಗೆ ಯಾವುದೇ ವಿಶ್ವಾಸಾರ್ಹತೆ ಹೊಂದಿರದ ಜನರಿಗೆ ಇದನ್ನು ಹೊರಗುತ್ತಿಗೆಗೆ ನೀಡಿದೆ. ಕೆಲವು ಪುಟಗಳನ್ನು ಡಿಲೀಟ್ ಮಾಡದಿರಲು ಮತ್ತು ಅವುಗಳ ವ್ಯಾಪ್ತಿಯನ್ನು ಗಣನೀಯವಾಗಿ ಕಡಿಮೆಗೊಳಿಸಲು ಫೇಸ್‌ಬುಕ್ ಇಂಡಿಯಾ ಆಡಳಿತ ಸಮಗ್ರವಾಗಿ ಪ್ರಯತ್ನಿಸಿದೆ. ಜೊತೆಗೆ, ಬಲಪಂಥೀಯ ಮತ್ತು ಕೇಂದ್ರದ ಸಿದ್ಧಾಂತವನ್ನು ಬೆಂಬಲಿಸುವ ಜನರಿಗೆ ಯಾವುದೇ ಸಹಾಯ ಅಥವಾ ಅವಕಾಶ ನೀಡಿಲ್ಲ” ಎಂದು ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







