ಯುವಿಸಿಇ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆ ಆರಂಭ: ಕೋವಿಡ್ ಮಾರ್ಗಸೂಚಿ ಅನುಸಾರ ಪರೀಕ್ಷೆ ಬರೆದ ವಿದ್ಯಾರ್ಥಿಗಳು
ಬೆಂಗಳೂರು, ಸೆ.1: ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ(ಯುವಿಸಿಇ) ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಂಗಳವಾರ(ಸೆ.1)ದಿಂದ ಪರೀಕ್ಷೆ ಆರಂಭವಾಗಿದ್ದು, ಇಲ್ಲಿನ ಕೆ.ಆರ್.ವೃತ್ತದಲ್ಲಿರುವ ಯುವಿಸಿಇನಲ್ಲಿ ನಡೆದ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೊರೋನ ಸಂದರ್ಭದಲ್ಲಿ ಸುರಕ್ಷತೆ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಪ್ರಯಾಣಕ್ಕೆ ಕಷ್ಟವಾಗುವ ವಿದ್ಯಾರ್ಥಿಗಳಿಗೆ ಈ ಮೊದಲೇ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿ ಕೊರೋನ ಸೋಂಕು ಇಲ್ಲದಿರುವುದನ್ನು ದೃಢಪಡಿಸಿಕೊಂಡು ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ ಕೊರೋನ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೊಠಡಿ ಮೀಸಲಿಡಲಾಗಿತ್ತು. ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಆಂಬ್ಯುಲೆನ್ಸ್, ಪಿಪಿಇ ಕಿಟ್ ವ್ಯವಸ್ಥೆ ಮಾಡಲಾಗಿತ್ತು.
ಪರೀಕ್ಷಾ ಸ್ಥಳಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಭೇಟಿ ನೀಡಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೆ.12ರವರೆಗೆ ಪರೀಕ್ಷೆ ನಡೆಯಲಿದ್ದು, ನಿರಾತಂಕವಾಗಿ ಪರೀಕ್ಷೆಯನ್ನು ಎದುರಿಸಬೇಕೆಂದು ಸಲಹೆ ನೀಡಿದರು.







