ಅನರ್ಹ ಶಾಸಕ ಮುನಿರತ್ನ ವಿರುದ್ಧ ಮೂಲ ಬಿಜೆಪಿಗರಿಂದ ಪ್ರತಿಭಟನೆ

ಬೆಂಗಳೂರು, ಸೆ.1: ಅನರ್ಹ ಶಾಸಕ ಮುನಿರತ್ನ ಅವರ ವಿರುದ್ಧ ಮೂಲ ಬಿಜೆಪಿಗರು ಆರ್.ಆರ್ ನಗರ ಪೊಲೀಸ್ ಠಾಣೆ ಮುಂಭಾಗ ಸೋಮವಾರ ರಾತ್ರಿ ಬಿಜೆಪಿ ಮುಖಂಡ ತುಳಸಿ ಮುನಿರಾಜ್ ನೇತತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಅನರ್ಹ ಶಾಸಕ ಮುನಿರತ್ನ ಇತ್ತೀಚೆಗೆ ಕೊರೋನ ಸೋಂಕಿಗೆ ತುತ್ತಾಗಿದ್ದು, ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದರ ಬಗ್ಗೆ ಬಿಜೆಪಿಯ ಕಾರ್ಯಕರ್ತ ಬದ್ರಿನಾಥ್ ಪರೋಕ್ಷವಾಗಿ ಕಮೆಂಟ್ ಮಾಡಿದ್ದರು. ಬದ್ರಿನಾಥ್ ಕಮೆಂಟ್ ಮಾಡಿದ ಕಾರಣ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ಸೋಮವಾರ ಬದ್ರಿನಾಥ್ ಮೇಲೆ ಎಫ್‍ಐಆರ್ ದಾಖಲಿಸಿ ಬಂಧಿಸಿದ್ದರು. ಬದ್ರಿನಾಥ್ ಬಂಧನ ಖಂಡಿಸಿ ನೂರಾರು ಮೂಲ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ತುಳಸಿ ಮುನಿರಾಜ್, ಅನರ್ಹ ಶಾಸಕನ ಹಗರಣವನ್ನು ಹೊರ ತರುವ ವಿಚಾರದ ಬಗ್ಗೆ ಸಾಮಾಜಕ ಜಾಲತಾಣದಲ್ಲಿ ಬರೆದಿದ್ದಾರೆ. ಈ ಕಾರಣಕ್ಕೆ ಹಿರಿಯ ನಾಗರಿಕ ಅನ್ನುವ ವಿಚಾರವನ್ನು ಗಮನಿಸದೆ ಬಂಧಿಸಿದ್ದಾರೆ. ಬದ್ರಿನಾಥ್ ಕಮೆಂಟ್ ಮಾಡಿದ್ದಕ್ಕೆ ಮಾಜಿ ಶಾಸಕ ಮುನಿರತ್ನ ಅಭಿಮಾನಿ ಬೆದರಿಕೆ ಕರೆ ಮಾಡಿದ್ದಾನೆ. ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುವ ಹಕ್ಕು ಇದೆ. ಬದ್ರಿನಾಥ್ ಅವರನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.







