ಸಾಲ ವಸೂಲಾತಿಗೆ ಒತ್ತಡ ಏರದಂತೆ ಮಂಡ್ಯ ಡಿಸಿ ಡಾ.ವೆಂಕಟೇಶ್ ಸೂಚನೆ

ಮಂಡ್ಯ, ಸೆ.1: ಕೊರೋನ ಹಿನ್ನೆಲೆಯಲ್ಲಿ ಜನರು ಸಂಕಷ್ಟದಲ್ಲಿರುವುದರಿಂದ ಮೈಕ್ರೋ ಮತ್ತು ಇತರೆ ಫೈನಾನ್ಸ್ ಸಂಸ್ಥೆಗಳು ಸಾಲ ಮರುಪಾವತಿಸುವಂತೆ ಒತ್ತಡ ಏರದೆ ಮಾನವೀತೆಯ ದೃಷ್ಠಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದ್ದಾರೆ.
ಕರುನಾಡ ಸೇವಕರು ಸಂಘಟನೆ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯದ ಪರಿಮಿತಿಯಲ್ಲಿರುವ ಸಾಲದ ಪ್ರಕರಣಗಳು ಮಂಡ್ಯದಲ್ಲೆ ಪರಿಹಾರವಾಗಬೇಕು. ಬೆಂಗಳೂರು ಮತ್ತು ಮೈಸೂರಿಗೆ ಬನ್ನಿ ಎಂದು ಕರೆಯಬಾರದು ಎಂದರು.
ಸಾಲ ತೆಗೆದುಕೊಂಡಿರುವ ವ್ಯಕ್ತಿಯನ್ನು ವಿನಯತೆಯಿಂದ ನಡೆಸಿಕೊಳ್ಳಬೇಕು ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಾಲ ಮತ್ತು ಬಡ್ಡಿಯನ್ನು ಹಿಂತಿರುಗಿಸಲು ಕಾಲಾವಕಾಶವನ್ನು ನೀಡಬೇಕು ಎಂದು ಅವರು ಕಿರುಸಾಲ ಹಾಗೂ ಫೈನಾನ್ಸ್ ಸಂಸ್ಥೆಗಳ ವ್ಯವಸ್ಥಾಪಕರಿಗೆ ಸೂಚಿಸಿದರು.
ವಾಹನವನ್ನು ವಶಪಡಿಕೊಳ್ಳದೆ ಕಾಲಾವಕಾಶವನ್ನು ನೀಡಬೇಕು ಮತ್ತು ಆರ್‍ಬಿಐ ಮತ್ತು ಸರಕಾರಗಳು ಕೊರೋನ ಹಿನ್ನಲೆಯಲ್ಲಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಅನುಸರಿಸಿಕೊಂಡು ಜನರಿಗೆ ಸೂಕ್ತ ಮಾಹಿತಿಯನ್ನು ನೀಡಬೇಕು ಎಂದು ಅವರು ಹೇಳಿದರು.
ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ವಾಹನ ಸಾಲ ನೀಡುವ ಬಜಾಜ್ ಮಹೇಂದ್ರ, ಚೋಳಮಂಡಲ, ಶ್ರೀರಾಮ್ ಸಂಸ್ಥೆಗಳು ಸಂಘಟಿತ ಗೂಂಡಾಗಿರಿ ನಡೆಸುತ್ತಿವೆ ಎಂದು ಆರೋಪಿಸಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದಾಗಿ ಜಿಲ್ಲೆಯ ಹಲವರು ಊರು ತೊರೆದಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಕಟ್ಟಲು ಸ್ಥಳೀಯವಾಗಿ ಕಚೇರಿ ತೆರೆಯದೆ ಬೆಂಗಳೂರು, ಮೈಸೂರಿಗೆ ಅಲೆಸುವುದು ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೈಕ್ರೋ ಫೈನಾನ್ಸ್ ಒಕ್ಕೂಟದ ಮುಖ್ಯಸ್ಥ ರವಿಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಒಂದೂವರೆ ಸಾವಿರ ಕೋಟಿ ಸಾಲ ನೀಡಲಾಗಿದೆ. ವಸೂಲಾತಿಯಲ್ಲಿ ಯಾವುದೇ ಒತ್ತಡ ಹೇರುವ ಬದಲು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಪ್ರತಿನಿಧಿಗಳು, ಮ್ರೈಕ್ರೋ ಫೈನಾನ್ಸ್ ಮುಖ್ಯಸ್ಥರು, ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಕರುನಾಡ ಸೇವಕರು ಸಂಘಟನೆಯ ನಗರಾಧ್ಯಕ್ಷ ಚಂದ್ರಶೇಖರ, ಸಂದೀಪ್, ಶಂಕರ್, ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ, ಜಬೀವುಲ್ಲಾ, ಪ್ರಸನ್ನ್, ನಗರಸಭಾ ಸದಸ್ಯರಾದ ನಯೀಮ್, ಝಾಕೀರ್, ಜಬೀವುಲ್ಲಾ. ಪ್ರಸನ್ನ ಬಾಣಸವಾಡಿ ನಗರಸಭಾ ಸಭಾಸದಸ್ಯರಾದ ನಯೀಮ್.ಝಾಕೀರ್, ಇತರರು ಉಪಸ್ಥಿತರಿದ್ದರು.







