60 ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೆ ಸರಕಾರ ಸಿದ್ಧತೆ

ಬೆಂಗಳೂರು, ಸೆ.2: ಬಿಬಿಎಂಪಿ ವ್ಯಾಪ್ತಿಗೆ ಇನ್ನು ಹೆಚ್ಚುವರಿಯಾಗಿ 60 ಹಳ್ಳಿಗಳನ್ನು ಸೇರ್ಪಡೆಗೆ ಸರಕಾರ ಮುಂದಾಗಿದ್ದು, ಈ ಸಂಬಂಧ ಮಸೂದೆ ಸಿದ್ಧಪಡಿಸಿ ಮುಂದಿನ ಅಧಿವೇಶನದಲ್ಲಿ ಅನುಮೋದನೆ ಪಡೆದು ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
2010ರಲ್ಲಿ 110 ಹಳ್ಳಿಗಳು, 7 ನಗರಸಭೆ, 1 ಪುರಸಭೆಯನ್ನು ಬಿಎಂಪಿಗೆ ಸೇರಿಸಿ ಬಿಬಿಎಂಪಿಯನ್ನಾಗಿ ಪರಿವರ್ತಿಸಲಾಯಿತು. 225 ಚದರ ಕಿ.ಮೀ.ವ್ಯಾಪ್ತಿಯ ಪಾಲಿಕೆ ಆಡಳಿತವನ್ನು 820 ಚದರ ಕಿ.ಮೀ.ಗೆ ವಿಸ್ತರಿಸಲಾಗಿತ್ತು. 100 ವಾರ್ಡ್ ಗಳನ್ನು 198 ವಾರ್ಡ್ ಗೆ ಹೆಚ್ಚಿಸಲಾಯಿತು. ಈ ವಾರ್ಡ್ ಗಳನ್ನು 8 ವಲಯಗಳಿಗೆ ಹಂಚಿಕೆ ಮಾಡಿ ಆಡಳಿತ ವಿಕೇಂದ್ರೀಕರಿಸಲಾಗಿದೆ.
ವಲಯ ರಚನೆಯಲ್ಲಿ ಅಸಮಾನತೆಯಿದ್ದು, ಕೆಲ ವಲಯಗಳಿಗೆ ಕೇವಲ 8 ವಾರ್ಡ್ ಗಳನ್ನು ನೀಡಿದರೆ ಇನ್ನು ಕೆಲ ವಲಯಕ್ಕೆ 30ಕ್ಕೂ ಹೆಚ್ಚಿನ ವಾರ್ಡ್ ಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಆಡಳಿತ ಸಮರ್ಪಕವಾಗಿ ನಡೆಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಹೊಸದಾಗಿ 60 ಹಳ್ಳಿಗಳನ್ನು ಸೇರ್ಪಡೆ ಮಾಡಿ ವಾರ್ಡ್ ಗಳ ಸಂಖ್ಯೆಯನ್ನು 224ಕ್ಕೆ ಹೆಚ್ಚಿಸುವುದು ಹಾಗೂ ಅವುಗಳನ್ನು ಸಮಾನವಾಗಿ 6 ವಲಯಗಳಿಗೆ ಹಂಚುವ ಕುರಿತು ರ್ಚಚಿಸಲಾಗಿದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ವಲಯಗಳಲ್ಲಿನ ಆಡಳಿತವನ್ನು ನೋಡಿಕೊಳ್ಳಲು ಜಂಟಿ ಆಯುಕ್ತರನ್ನು ನೇಮಿಸಲಾಗಿದೆ. ಅವರು ಐಎಎಸ್ ಅಧಿಕಾರಿಯಾಗಿರಬೇಕು ಎಂಬ ನಿಯಮವಿದೆ. ಆದರೆ, ಬಹುತೇಕ ವಾರ್ಡ್ ಗಳಲ್ಲಿ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ, ಬಿಬಿಎಂಪಿ ವಿಸ್ತರಣೆ ನಂತರ ಪ್ರತಿ ವಲಯಕ್ಕೆ ಒಬ್ಬ ಐಎಎಸ್ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಲಾಗುತ್ತದೆ. ಅವರ ಆಡಳಿತವನ್ನು ನಿಯಂತ್ರಿಸಲು ಪ್ರಧಾನ ಕಾರ್ಯದರ್ಶಿ ಗ್ರೇಡ್‍ನ ಒಬ್ಬರನ್ನು ಸುಪ್ರೀಂ ಆಯುಕ್ತರಮನ್ನಾಗಿ ನೇಮಿಸಲಾಗುತ್ತದೆ.
ಯಾವೆಲ್ಲ ಕ್ಷೇತ್ರಗಳ ಹಳ್ಳಿಗಳು?: ಯಲಹಂಕ, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಮಹದೇವಪುರ ಮತ್ತು ಯಶವಂತಪುರ ಕ್ಷೇತ್ರಗಳ ಕೆಲ ಹಳ್ಳಿಗಳು ಈಗಲೂ ಗ್ರಾಪಂ ವ್ಯಾಪ್ತಿಯಲ್ಲಿವೆ. ಅವುಗಳಿಗೆ ಹತ್ತಿರದ ಹಳ್ಳಿಗಳನ್ನು ಗ್ರಾಪಂನಿಂದ ಬೇರ್ಪಡಿಸಿ, ಬಿಬಿಎಂಪಿಗೆ ಸೇರ್ಪಡೆಗೊಳಿಸಲಾಗುತ್ತದೆ.
ಕಾನೂನು ತೊಡಕು ಸಾಧ್ಯತೆ: ಸದ್ಯದಲ್ಲಿಯೇ ರಾಜ್ಯದಲ್ಲಿ ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಬಿಬಿಎಂಪಿಗೆ ಸೇರ್ಪಡೆಗೊಳ್ಳುವ ಹಳ್ಳಿಗಳ ಪಂಚಾಯಿತಿಗಳಿಗೂ ಚುನಾವಣೆ ನಡೆಯಲಿದೆ. ಹೀಗೆ ಚುನಾವಣೆ ನಡೆದ ನಂತರ ಅವುಗಳನ್ನು ಇನ್ನೊಂದು ವರ್ಷದಲ್ಲಿ ಬಿಬಿಎಂಪಿಗೆ ಸೇರ್ಪಡೆಗೊಳಿಸುವ ಯೋಚನೆ ಸರಕಾರ ಮಾಡಲಾಗುತ್ತಿದೆ.
ಈ ರೀತಿ ಮಾಡಬೇಕಾದರೆ ಚುನಾವಣೆ ನಡೆದಿರುವ ಗ್ರಾಪಂಗಳನ್ನು ಸೂಪರ್ ಸೀಡ್ ಮಾಡಬೇಕು. ಒಂದು ವೇಳೆ ಆ ರೀತಿಯ ಪ್ರಕ್ರಿಯೆಗೆ ಸರಕಾರ ಕೈಹಾಕಿದರೆ, ಗ್ರಾಪಂ ಸದಸ್ಯರು ನ್ಯಾಯಾಲಯದ ಮೊರೆ ಹೋಗುವಂತಹ ಸಂಭವವಿದೆ. ಆದುದರಿಂದಾಗಿ ಈ ಬಾರಿ ಬಿಬಿಎಂಪಿಗೆ ಸಾಕಷ್ಟು ಕಾನೂನು ತೊಂದರೆಗಳು ಎದುರಾಗುವ ಸಾಧ್ಯತೆಯಿದೆ.
ಹಳೆಯ ತಪ್ಪುಗಳೇ ಸರಿಯಾಗಿಲ್ಲ: ಪಾಲಿಕೆ ಆಡಳಿತದ ವ್ಯಾಪ್ತಿ ಹೆಚ್ಚಾದ ಕಾರಣ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಅಲ್ಲದೆ, ಒಬ್ಬ ಆಯುಕ್ತ, 1 ವರ್ಷದ ಅಧಿಕಾರಾವಧಿಯ ಮೇಯರ್ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳಿವೆ. ಈ ಎಲ್ಲ ಕಾರಣಗಳಿಂದ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತಿಲ್ಲ. ಈ ವೇಳೆ ಬಿಬಿಎಂಪಿ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರೆ, ಸಮಸ್ಯೆ ಉಲ್ಬಣವಾಗಲಿದೆ. ಒಂದು ವೇಳೆ ವಿಸ್ತರಿಸಿದರೂ, ಆದಾಯ, ಆಡಳಿತ ವಿಕೇಂದ್ರೀಕರಣ, ಆಡಳಿತದ ಮೇಲೆ ನಿಗಾವಹಿಸುವ ಕ್ರಮಗಳು ಕಠಿಣವಾಗಿರಬೇಕು ಎಂದು ಬಿಬಿಎಂಪಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.







