ಉಡುಪಿ: ಶೈಕ್ಷಣಿಕ ಅರಿವು ಸಾಲದ ಮೊತ್ತ ಶೀಘ್ರ ಬಿಡುಗಡೆಗೆ ಆಗ್ರಹಿಸಿ ಮನವಿ

ಉಡುಪಿ, ಸೆ.2: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಜೂನ್ ತಿಂಗಳಲ್ಲಿ ಮಂಜೂರು ಆಗುತ್ತಿದ್ದ ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ಅರಿವು ಸಾಲದ ಮೊತ್ತ ಈ ಬಾರಿ ಬಹಳ ವಿಳಂಬವಾಗಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲವಾಗುವಂತೆ ಶೀಘ್ರವೇ ಸಾಲದ ಮೊತ್ತ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಎಸ್‌ಐಓ ಉಡುಪಿ ಜಿಲ್ಲಾ ಘಟಕ ಇಂದು ಮುಖ್ಯಮಂತ್ರಿ ಹಾಗೂ ರಾಜ್ಯ ಅಲ್ಪಸಂಖ್ಯಾತ ಇಲಾಖೆಗೆ ಮನವಿ ಸಲ್ಲಿಸಿದೆ.
ಉಡುಪಿ ಜಿಲ್ಲೆಯಲ್ಲಿ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ಧರ್ಮದ ವಿದ್ಯಾರ್ಥಿಗಳಿಗೆ ಇದುವರೆಗೂ ಯಾವುದೇ ರೀತಿಯ ಸಾಲದ ಮೊತ್ತ ಆಯಾ ಕಾಲೇಜುಗಳಿಗೆ ಲಭಿಸಿಲ್ಲ. ಮತ್ತು ಕೆಎಂಡಿಸಿಯವರು ಜೂನ್ ತಿಂಗಳಿಂದ ಹಣ ಬಿಡುಗಡೆ ಆಗುತ್ತದೆ ಎಂಬ ಸುಳ್ಳು ಭರವಸೆಯನ್ನು ನೀಡುತ್ತಲೇ ಬರುತ್ತಿದ್ದಾರೆ. ಸಾಲದ ಮೊತ್ತವನ್ನೇ ನಂಬಿದ ವಿದ್ಯಾರ್ಥಿಗಳಿಗೆ ಇದೀಗ ದಿಕ್ಕಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಲಭಿಸದೆ ವಿಳಂಬವಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಜೊತೆ ಚರ್ಚಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ಎಸ್‌ಐಓ ಜಿಲ್ಲಾದ್ಯಕ್ಷ ನಾಸೀರ್ ಹೂಡೆ, ಜಿಲ್ಲಾ ಕಾರ್ಯದರ್ಶಿ ಶಾರೂಕ್, ಸದಸ್ಯರಾದ ಅಫ್ವಾನ್, ಸಲಾವುದ್ದೀನ್, ವಸೀಮ್, ಅಯಾನ್ ಮತ್ತು ರಿಝಾನ್ ಉಪಸ್ಥಿತರಿದ್ದರು.





