ಆತ್ಮಹತ್ಯೆಗೆ ಯತ್ನಿಸಿದ ವೃದ್ದೆಯ ರಕ್ಷಣೆ: ನೆರವಿಗೆ ಮನವಿ
ಉಡುಪಿ, ಸೆ.2: ಮಾನಸಿಕವಾಗಿ ನೊಂದಿರುವ ವೃದ್ಧೆಯೊರ್ವರು ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ಉಪ್ಪೂರಿನಲ್ಲಿ ನಡೆದಿದೆ.
ಮಕ್ಕಳು ಇಲ್ಲದೆ ಒಂಟಿ ಜೀವನ ನಡೆಸುತ್ತಿದ್ದ ಸೋಮು ಮರಕಾಲ್ತಿ(70) ಮಾನಸಿಕವಾಗಿ ನೊಂದಿದ್ದರು. ವಿಷಯ ತಿಳಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ, ಸೋಮು ಮರಕಾಲ್ತಿ ಅವರನ್ನು ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿ ಮಾನವೀಯತೆ ಮೆರೆದಿದ್ದಾರೆ. ಘಟನೆಯ ಬಗ್ಗೆ ವಿಶು ಶೆಟ್ಟಿ ಹಿರಿಯ ನಾಗರಿಕರ ಸಹಾಯವಾಣಿ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಅಸಹಾಯಕ ವೃದ್ಧೆಯ ನೆರವಿಗೆ ಸಮಾಜದ ಸಂಘ ಸಂಸ್ಥೆಗಳು ಸಂಬಂಧ ಪಟ್ಟವರು ಮುಂದೆ ಬರಬೇಕೆಂದು ವಿನಂತಿಸಲಾಗಿದೆ. ಸಂಬಂಧಿಕರು ವಿವರಗಳಿಗೆ ಹಿರಿಯ ನಾಗರಿಕರ ಸಹಾಯವಾಣಿ ಅಥವಾ ಮಹಿಳಾ ಠಾಣೆಯ ದೂರವಾಣಿ ಸಂಖ್ಯೆ 0820-2525599 ಸಂಪರ್ಕಿಸಬಹುದು. ವೃದ್ದೆಯ ರಕ್ಷಣೆ ಕಾರ್ಯಾಚರಣೆಯಲ್ಲಿ ಹಿರಿಯ ನಾಗರಿಕ ಸಹಾಯವಾಣಿಯ ರಶ್ಮಿತಾ ಹಾಗೂ ಅನಿತಾ ಸಹಕರಿಸಿದ್ದಾರೆ.
Next Story





