ಕಾಲ್ತೋಡು: ಗೊರಕಲ್ ಕಟ್ಟಡ ಕಾರ್ಮಿಕರ ಸಮಾವೇಶ

ಬೈಂದೂರು, ಸೆ.2: ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು)ದ ನೆತೃತ್ವದಲ್ಲಿ ಕಾಲ್ತೋಡು ಗ್ರಾಮದ ಗೊರಕಲ್ ಪ್ರದೇಶದ ಕಟ್ಟಡ ಕಾರ್ಮಿಕರ ಸಮಾವೇಶವು ಸ್ಥಳೀಯ ಗೋಪಾಲ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಆ.31ರಂದು ಜರುಗಿತು.
ಸಮಾವೇಶವನ್ನು ಉದ್ಘಾಟಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ದೇವಾಡಿಗ ತೊಂಡೆಮಕ್ಕಿ ಮಾತನಾಡಿ, ಕೇಂದ್ರ ಸರಕಾರ ಕಾರ್ಮಿಕ ಕಾನೂನು ಗಳನ್ನು ರದ್ದು/ತಿದ್ದುಪಡಿ/ಅಮಾನತು ಮಾಡುವ ಎಲ್ಲಾ ಪ್ರಸ್ತಾವಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡ ವೆಂಕಟೇಶ್ ಕೋಣಿ, ಅಮ್ಮಯ್ಯ ಪೂಜಾರಿ ಬಿಜೂರು ಮಾತನಾಡಿದರು. ಕೊರೊನ ಸಂಕಷ್ಟದಲ್ಲಿ ನಿರುದ್ಯೋಗಿಗಳಾಗಿರುವ ಎಲ್ಲಾ ಬಡ ಕಾರ್ಮಿಕರಿಗೆ ಮಾಸಿಕ 7500ರೂ.ನಂತೆ ಆರು ತಿಂಗಳವರೆಗೆ ನಗದು ಪರಿಹಾರ ಕೊಡಬೇಕು ಎಂದು ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಗೊರಕಲ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ರಾಗಿ ಶ್ರೀಧರ್ ಆಚಾರ್, ಕಾರ್ಯದರ್ಶಿಯಾಗಿ ರಾಘವೇಂದ್ರ ಆಚಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಕಾರ್ಯ ದಶಿರ್ ರಾಘವೇಂದ್ರ ಆಚಾರ್ ವಂದಿಸಿದರು.







