ಶಿವಮೊಗ್ಗ: ಜಲ್ಲಿ ಕ್ರಷರ್ ನಲ್ಲಿ ಅವಘಡ; ಇಬ್ಬರು ಕೂಲಿ ಕಾರ್ಮಿಕರು ಸಾವು

ಶಿವಮೊಗ್ಗ, ಸೆ.2: ಕ್ರಷರ್ ನಲ್ಲಿದ್ದ ಶೆಡ್ ನ ಮೇಲ್ಛಾವಣಿ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ಗೆಜ್ಜೇನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಹಟ್ಟಿಲಕ್ಷ್ಮಮ್ಮ ಕ್ರಷರ್ ನಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಬಿಹಾರ ಮೂಲದ ಜಿಕೋಲಾಂಗ್ (25) ಟ್ರೈನಿಕ್ಟೋಜ್ (25) ಮೃತಪಟ್ಟವರು.
ಮೇಲ್ಛಾವಣಿ ಮೇಲೆ ಸಂಗ್ರಹವಾಗಿದ್ದ ಕಲ್ಲು ಹಾಗೂ ಪಕ್ಕದಲ್ಲೇ ಲೋಡ್ ನಲ್ಲಿದ್ದ ಟ್ರಾಲಿಯ ಕಲ್ಲು ಕುಸಿದು ಬಿದ್ದ ಹಿನ್ನೆಲೆಯಲ್ಲಿ ಇದರ ಅಡಿಯಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದ. ಈತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ವಿನೋಬನಗರ ಠಾಣೆಯ ಪಿಎಸ್ಐ ಉಮೇಶ್ ಕುಮಾರ್ ಹಾಗೂ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹೊರ ರಾಜ್ಯದಿಂದ ಜೀವನೋಪಾಯಕ್ಕಾಗಿ ಹಾಗೂ ದುಡಿಮೆಯನ್ನು ಅರಸಿ ಬಂದಿರುವ ಹಲವಾರು ಕುಟುಂಬಗಳಿಗೆ ಮತ್ತು ಕಾರ್ಮಿಕರಿಗೆ ಜೀವ ಭದ್ರತೆಯೇ ಇಲ್ಲವಾಗಿದೆ. ಎಷ್ಟೋ ಪ್ರಕರಣಗಳು ಮುಚ್ಚಿ ಹೋಗಿವೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಇವುಗಳ ಬಗ್ಗೆ ಗಮನಹರಿಸುವ ಮೂಲಕ ಬಡ ಜನರ ಜೀವವನ್ನು ಉಳಿಸುವಂತಾಗಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.







