ಆತ್ಮನಿರ್ಭರ್ ಪ್ಯಾಕೇಜ್: ಕಾರ್ಮಿಕರಿಗೆ ವಿತರಣೆಯಾದ ಆಹಾರ ಧಾನ್ಯದ ಪ್ರಮಾಣ ಶೇ.33ರಷ್ಟು ಮಾತ್ರ!

ಹೊಸದಿಲ್ಲಿ: ಕೇಂದ್ರ ಸರಕಾರದ ಆತ್ಮನಿರ್ಭರ್ ಪ್ಯಾಕೇಜ್ ಅನ್ವಯ ವಲಸಿಗ ಕಾರ್ಮಿಕರಿಗೆ ವಿತರಿಸಲು ಮೀಸಲಾಗಿದ್ದ 8 ಲಕ್ಷ ಟನ್ ಆಹಾರ ಧಾನ್ಯ (ಅಕ್ಕಿ ಮತ್ತು ಗೋಧಿ) ಪೈಕಿ ಕೇವಲ ಶೆ 33ರಷ್ಟು ವಿತರಣೆಯಾಗಿದೆ. ಕೇಂದ್ರ ಮೀಸಲಿರಿಸಿದ್ದ 29,132 ಟನ್ ಬೇಳೆಯಲ್ಲಿ ಶೇ 56ರಷ್ಟು ಮಾತ್ರ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು thewire.in ವರದಿ ಮಾಡಿದೆ.
ಈ ಯೋಜನೆ ದೇಶದ 8 ಕೋಟಿ ವಲಸಿಗ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂದು ಯೋಜನೆ ಘೋಷಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರೂ ರಾಜ್ಯಗಳು ಮಾತ್ರ ವಲಸಿಗರ ಸಂಖ್ಯೆಯನ್ನು 2.8 ಕೋಟಿ ಎಂದು ಹೇಳಿದ್ದವು.
ಆಗಸ್ಟ್ 31ರ ಅಂಕಿಅಂಶದಂತೆ ಕೇಂದ್ರ ಒದಗಿಸಿದ್ದ 8 ಲಕ್ಷ ಟನ್ ಆಹಾರ ಧಾನ್ಯದ ಪೈಕಿ 6.38 ಲಕ್ಷ ಟನ್ ಆಹಾರ ಧಾನ್ಯವನ್ನು ರಾಜ್ಯಗಳು ಪಡೆದುಕೊಂಡಿದ್ದರೂ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 2.64 ಟನ್ ಆಹಾರ ಧಾನ್ಯ ಮಾತ್ರ ವಿತರಣೆಯಾಗಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತಗಳ ಪೈಕಿ 26 ತಮಗೆ ಮೀಸಲಾದ ಸಂಪೂರ್ಣ ಆಹಾರಧಾನ್ಯಗಳನ್ನು ಪಡೆದುಕೊಂಡಿದ್ದರೆ , ಬಿಹಾರ, ಛತ್ತೀಸಗಢ, ನಾಗಾಲ್ಯಾಂಡ್ ಮತ್ತು ಒಡಿಶಾ ಶೇ 100ರಷ್ಟು ಫಲಾನುಭವಿಗಳಿಗೆ ವಿತರಣೆ ಮಾಡಿವೆ. ತೆಲಂಗಾಣದಲ್ಲಿ ಶೇ 1ರಷ್ಟು ಆಹಾರ ಧಾನ್ಯ ಹಾಗೂ ಗೋವಾದಲ್ಲಿ ಶೇ 3ರಷ್ಟು ಆಹಾರಧಾನ್ಯ ವಿತರಣೆಯಾಗಿದೆ.







