ನಕಲಿ ಬಿಲ್ ಸೃಷ್ಟಿಸಿ ಬಿಬಿಎಂಪಿ ಅಧಿಕಾರಿಗಳಿಂದ 250 ಕೋಟಿ ರೂ. ಅಕ್ರಮ: ಆರೋಪ
ಲೋಕಾಯುಕ್ತಕ್ಕೆ ಸಂಸದ ಡಿ.ಕೆ ಸುರೇಶ್ ದೂರು

ಬೆಂಗಳೂರು, ಸೆ.2: ನಗರದ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಬಿಎಂಪಿ ಅಧಿಕಾರಿಗಳು ನಕಲಿ ಬಿಲ್ ಸೃಷ್ಟಿಸಿ 250 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಆರೋಪಿಸಿ ಸಂಸದ ಡಿ.ಕೆ. ಸುರೇಶ್ ಬುಧವಾರ ಲೋಕಾಯುಕ್ತದಲ್ಲಿ ದೂರು ನೀಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಇಂಜಿನಿಯರ್ ಗಳು ಜನವರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ. ಒಟ್ಟು 130 ಕಾಮಗಾರಿಗಳ ಒಟ್ಟು 250 ಕೋಟಿ ರೂ. ನಕಲಿ ಬಿಲ್ ಪಡೆದಿದ್ದಾರೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಜನವರಿಯಲ್ಲಿ ಬಿಲ್ ಪಡೆದು ಈಗ ತರಾತುರಿಯಲ್ಲಿ ಕೆಲಸ ಮಾಡಿ ಮುಗಿಸಲು ಹೊರಟಿದ್ದಾರೆ. ಬಿಬಿಎಂಪಿ ಇಂಜಿನಿಯರ್ ಗಳು ಈ ಕೆಲಸ ಮಾಡಿದ್ದಾರೆ, ಇಂಜಿನಿಯರ್ ಗಳೇ ಇದಕ್ಕೆ ಜವಾಬ್ದಾರರು. ಇದಕ್ಕೂ ಮುನಿರತ್ನ ಅವರಿಗೂ ಯಾವುದೇ ಸಂಬಂಧ ಇಲ್ಲ. ಅವರು ಈಗ ಮಾಜಿ ಶಾಸಕರು. ಆದರೆ ಈ ಬಿಲ್‍ಗಳಿಗೆ ಬಿಬಿಎಂಪಿ ಇಂಜಿನಿಯರ್ ಗಳೇ ಹೊಣೆ ಎಂದರು.
ಲೋಕಾಯುಕ್ತಕ್ಕೆ ಎಲ್ಲ ದಾಖಲೆಗಳನ್ನು ಕೊಟ್ಟಿದ್ದೇನೆ. ಕೊರೋನ ಸಂದರ್ಭದಲ್ಲಿ ಈ ರೀತಿ ಲೂಟಿ ಹೊಡೆದಿದ್ದಾರೆ. ಬಿಬಿಎಂಪಿ ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಲ್ಲಿ ಇಂಜಿನಿಯರ್ ಗಳ ಪಾತ್ರ ಇದೆ ಹೊರತು ಬೇರೆ ಯಾರ ಪಾತ್ರವೂ ಇಲ್ಲ ಎಂದು ಹೇಳಿದರು.







