ಲಡಾಖ್ ಘಟನೆಯ ಬಳಿಕ ಅರುಣಾಚಲ ಗಡಿಯಲ್ಲಿ ಭದ್ರತಾ ವ್ಯವಸ್ಥೆ ಬಿಗುಗೊಳಿಸಿದ ಭಾರತ
ಇಂಫಾಲ, ಸೆ.2: ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತ-ಚೀನಾ ಸೇನೆಯ ಮಧ್ಯೆ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಅರುಣಾಚಲ ಗಡಿಯಲ್ಲಿ ಭಾರತ ತನ್ನ ಸೇನಾಬಲವನ್ನು ಹೆಚ್ಚಿಸಿದೆ ಎಂದು ಸರಕಾರದ ಮೂಲಗಳು ಹೇಳಿವೆ.
ಅರುಣಾಚಲದ ಅಂಜ್ವಾ ಜಿಲ್ಲೆಯಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಚೀನಾದ ಸೇನೆಯ ಉಪಸ್ಥಿತಿ ಕ್ರಮೇಣ ಹೆಚ್ಚುತ್ತಿರುವುದನ್ನು ಗಮನಿಸಿ ಭಾರತವೂ ಸೇನಾಬಲವನ್ನು ಹೆಚ್ಚಿಸಲು ನಿರ್ಧರಿಸಿದೆ. ಭಾರತ ಸೇನೆಯ ಹಲವು ಬಟಾಲಿಯನ್‌ಗಳು ಈಗಾಗಲೇ ಅಲ್ಲಿ ಸಜ್ಜಾಗಿ ನಿಂತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಟಿಬೆಟ್ ಎಂದು ಚೀನಾ ಪ್ರತಿಪಾದಿಸುತ್ತಿರುವ ಅರುಣಾಚಲ ಪ್ರದೇಶವು 1962ರ ಭಾರತ-ಚೀನಾ ಯುದ್ಧದ ಸಂದರ್ಭ ಸಂಘರ್ಷದ ಕೇಂದ್ರ ಬಿಂದುವಾಗಿತ್ತು. ಇದೇ ಪರಿಸ್ಥಿತಿ ಮತ್ತೆ ಪುನರಾವರ್ತನೆಯಾಗಬಹುದು ಎಂದು ಭದ್ರತಾ ವಿಶ್ಲೇಷಕರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆದರೆ ಇದು ಸಹಜ ಪ್ರಕ್ರಿಯೆಯಾಗಿದ್ದು , ತುಕಡಿಗಳ ಆವರ್ತನ ಆಗಿಂದಾಗ್ಗೆ ನಡೆಯುತ್ತಿದೆ. ಗಡಿಭಾಗದಲ್ಲಿ ಇದುವರೆಗೆ ಯಾವುದೇ ಅಸಹಜ ಚಟುವಟಿಕೆ ವರದಿಯಾಗಿಲ್ಲ ಮತ್ತು ಆತಂಕ ಪಡಬೇಕಿಲ್ಲ ಎಂದು ಭಾರತೀಯ ಸೇನೆಯ ವಕ್ತಾರ ಲೆಕ ಹರ್ಷವರ್ಧನ ಪಾಂಡೆ ಹೇಳಿದ್ದಾರೆ.
ಆದರೆ ಅರುಣಾಚಲ ಪ್ರದೇಶದಲ್ಲಿ ಚೀನಾದ ಸೇನೆ ಆಗಿಂದಾಗ್ಗೆ ಭಾರತದ ಪ್ರದೇಶದೊಳಗೆ ಅತಿಕ್ರಮಣ ನಡೆಸುತ್ತಿರುತ್ತದೆ. ಇದರಲ್ಲಿ ಹೊಸದೇನೂ ಇಲ್ಲ ಎಂದು ಅರುಣಾಚಲದ ಸಂದ ತಪೀರ್ ಗವೊ ಹೇಳಿದ್ದಾರೆ.







