ರಿಯಾ ಚಕ್ರವರ್ತಿ ಸಹೋದರನಿಗೆ ಮಾದಕ ದ್ರವ್ಯ ಪೂರೈಕೆ: ಎನ್‌ಸಿಬಿಯಿಂದ ಇಬ್ಬರ ಬಂಧನ

ಮುಂಬೈ, ಸೆ. 2: ನಟಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್‌ಗೆ ಮಾದಕ ದ್ರವ್ಯ ಪೂರೈಕೆ ಮಾಡಿದ ಆರೋಪದಲ್ಲಿ ಮಾದಕ ದ್ರವ್ಯ ನಿಯಂತ್ರಣ ಬ್ಯುರೋ (ಎನ್‌ಸಿಬಿ) ಮುಂಬೈಯಿಂದ ಬುಧವಾರ ಇಬ್ಬರನ್ನು ಬಂಧಿಸಿದೆ.
ಆರೋಪಿಗಳು ಮಾದಕ ದ್ರವ್ಯವನ್ನು ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯ ಮ್ಯಾನೇಜರ್ ಸಾಮ್ಯುವೆಲ್ ಮಿರಾಂಡಾ ಅವರಿಗೆ ನೀಡುತ್ತಿದ್ದರು. ಅವರು ಶೋವಿಕ್‌ಗೆ ತಲುಪಿಸುತ್ತಿದ್ದರು ಎಂದು ಎನ್‌ಸಿಬಿ ಹೇಳಿದೆ.
ಶೋವಿಕ್ ಹಾಗೂ ಮಿರಾಂಡಾ ನಡುವೆ ನಡೆದ ಕೆಲವು ಸಂಭಾಷಣೆಯ ಆಧಾರದಲ್ಲಿ ಎನ್‌ಸಿಬಿ ಬಾಂದ್ರಾದ ಅಬ್ದುಲ್ ಬಾಸಿತ್ ಪರಿಹಾರ್ ಹಾಗೂ ಅಂಧೇರಿಯ ಝೈದ್ ವಿಲಾತ್ರಾ ಅವರನ್ನು ಬಂಧಿಸಿದೆ. ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಮುನ್ನ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗಳು ಮಾದಕ ದ್ರವ್ಯವನ್ನು ಅಂತಿಮವಾಗಿ ಯಾರಿಗೆ ನೀಡುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಿವುಡ್ ಪಾರ್ಟಿಗಳಿಗೆ ಗಾಂಜಾ ಪೂರೈಸಿದ ಆರೋಪದಲ್ಲಿ ಎನ್‌ಸಿಬಿ ಈ ಹಿಂದೆ ಇಬ್ಬರನ್ನು ಬಂಧಿಸಿತ್ತು. ಅವರು ಅನಂತರ ಜಾಮೀನು ಮೇಲೆ ಬಿಡುಗಡೆಗೊಂಡಿದ್ದರು. ರಿಯಾ ಚಕ್ರವರ್ತಿ ಅವರಿಂದ ಯಾವುದೇ ಮಾದಕ ದ್ರವ್ಯ ಪತ್ತೆಯಾಗದ ಹಿನ್ನೆಲೆಯಲ್ಲಿ ನಗರದ ಸ್ಥಳೀಯ ಮಾದಕ ದ್ರವ್ಯ ಜಾಲದ ಕುರಿತು ಮಾಹಿತಿ ಕಲೆ ಹಾಕಲು ಎನ್‌ಸಿಬಿ ಆರಂಭಿಸಿತ್ತು. ಅಲ್ಲದೆ, ರಿಯಾಗೆ ಈ ಜಾಲದೊಂದಿಗೆ ನಂಟು ಇದೆಯೇ ಎಂದು ಪರಿಶೀಲಿಸಿತ್ತು. ರಿಯಾ ಚಕ್ರವರ್ತಿಯ ವ್ಯಾಟ್ಸ್ ಆ್ಯಪ್ ಚಾಟ್ ಸೋರಿಕೆಯಾದ ಬಳಿಕ ರಿಯಾ ವಿರುದ್ಧ ಎನ್‌ಸಿಬಿ ಈ ಹಿಂದೆ ಎಫ್‌ಐಆರ್ ದಾಖಲಿಸಿತ್ತು.







