ಬಿಹಾರ: ಜಿತನ್ ರಾಮ್ ಮಾಂಝಿ ಪಕ್ಷ ಎನ್ ಡಿಎಗೆ

ಪಾಟ್ನಾ,ಸೆ.2: ಈ ವರ್ಷದ ಅಕ್ಟೋಬರ್-ನವಂಬರ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ನೇತೃತ್ವದ ಹಿಂದುಸ್ಥಾನಿ ಆವಾಮ್ ಮೋರ್ಚಾ (ಜಾತ್ಯತೀತ) ಎನ್‌ಡಿಎಗೆ ಸೇರ್ಪಡೆಗೊಳ್ಳಲಿದೆ.
ಗುರುವಾರ ಪಾಟ್ನಾದಲ್ಲಿ ಎನ್‌ಡಿಎಗೆ ಪಕ್ಷದ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು,ಪಕ್ಷಾಧ್ಯಕ್ಷ ಮಾಂಝಿ ಅವರು ಅದನ್ನು ವಿಧ್ಯುಕ್ತವಾಗಿ ಪ್ರಕಟಿಸಲಿದ್ದಾರೆ. ಬಿಹಾರದ ಅಭಿವೃದ್ಧಿಯ ಏಕೈಕ ಉದ್ದೇಶದಿಂದ ಪಕ್ಷವು ಎನ್‌ಡಿಎ ಜೊತೆ ಸೇರಲಿದೆ ಎಂದು ತಿಳಿಸಿದ ಪಕ್ಷದ ವಕ್ತಾರ ದಾನಿಶ್ ರಿಝ್ವಾನ್ ಅವರು, “ಸೀಟುಗಳು ನಮಗೆಂದೂ ಸಮಸ್ಯೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿಯ ಆರ್ಥಿಕ ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ರೀತಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಾರ್ಯಗಳಿಂದ ನಾವು ಪ್ರಭಾವಿತರಾಗಿದ್ದೇವೆ ಮತ್ತು ಅದರ ಭಾಗವಾಗಲು ಬಯಸಿದ್ದೇವೆ” ಎಂದು ಹೇಳಿದರು.
ಎರಡೂವರೆ ವರ್ಷ ಕಾಲ ಬಿಹಾರದಲ್ಲಿನ ಪ್ರತಿಪಕ್ಷ ಮೈತ್ರಿಕೂಟ ‘ಮಹಾಘಟಬಂಧನ ’ದಲ್ಲಿದ್ದ ಮಾಂಝಿ ಪಕ್ಷವು ಕಳೆದ ತಿಂಗಳು ಮೈತ್ರಿಯಿಂದ ಹೊರಗೆ ಬಂದಿತ್ತು.





