ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪ: ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಸೆ.2: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಬಳಿಕ ಮದುವೆಯಾಗದೆ ವಂಚಿಸಿದ್ದಾನೆ ಎಂದು ಆರೋಪಿಸಿ ದ.ಕ. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ಬೆಂಗಳೂರಿನ ಯುವತಿಯೊಬ್ಬರು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೆವಾಡಿ ನಿವಾಸಿ ಸಾಯಬಣ್ಣ ಅತ್ಯಾಚಾರ ನಡೆಸಿದ ಆರೋಪಿ. ಈತನೊಂದಿಗೆ ಸೇರಿ ಬೆಂಗಳೂರಿನ ರಮೇಶ್ ಗೌಡ ಎಂಬಾತ ಬೆದರಿಕೆಯೊಡ್ಡಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.
ಫೇಸ್‌ಬುಕ್ ಮೂಲಕ ಪರಿಚಯವಾದ ಸಾಯಬಣ್ಣ ಮೇ 20ರಂದು ಮದುವೆ ಮಾತುಕತೆಗೆಂದು ಬೆಂಗಳೂರಿಗೆ ಬಂದಿದ್ದು, ಆ ದಿನ ಅಲ್ಲೇ ಉಳಿದುಕೊಂಡು ಅತ್ಯಾಚಾರ ಎಸಗಿದ್ದಾನೆ. ಜೂ.12ರಂದು ಮಂಗಳೂರಿನ ಕ್ವಾಟ್ರಸ್‌ಗೆ ಕರೆಸಿ ಅಲ್ಲಿಯೂ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮದುವೆಯಾಗುವಂತೆ ಒತ್ತಾಯಿಸಿದಾಗ ಆತ ನಿರಾಕರಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಜು.25ರಂದು ಬೆಂಗಳೂರಿಗೆ ಮದುವೆ ಮಾತುಕತೆಗೆಂದು ಬಂದ ಸಾಯಬಣ್ಣ ಹಾಗು ರಮೇಶ್ ಗೌಡ ಆಗಮಿಸಿದ್ದು, ಈ ಸಂದರ್ಭ ಸಾಯಬಣ್ಣ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದರೆ, ನಿನ್ನ ವಿರುದ್ಧವೂ ಕೇಸ್ ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.







