ಹಿಂದೂಗಳನ್ನು ಓಲೈಸಲು ಬೈಡನ್ ಪ್ರಚಾರ ತಂಡದಿಂದ ಗುಂಪು ರಚನೆ

ವಾಶಿಂಗ್ಟನ್, ಸೆ. 2: ಅಮೆರಿಕದಲ್ಲಿರುವ 20 ಲಕ್ಷಕ್ಕೂ ಅಧಿಕ ಹಿಂದೂ ಸಮುದಾಯದ ಸದಸ್ಯರನ್ನು ಒಲಿಸಿಕೊಳ್ಳುವ ಹಾಗೂ ದ್ವೇಷಾಪರಾಧಗಳು ಸೇರಿದಂತೆ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನಗಳ ಭಾಗವಾಗಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ರ ಪ್ರಚಾರ ತಂಡವು ‘ಹಿಂದೂ ಅಮೆರಿಕನ್ಸ್ ಫಾರ್ ಬೈಡನ್’ ಎಂಬ ಗುಂಪೊಂದನ್ನು ರಚಿಸಿದೆ.
ಇಲಿನಾಯಿಸ್‌ನ ಭಾರತೀಯ-ಅಮೆರಿಕನ್ ಕಾಂಗ್ರೆಸಿಗ ರಾಜಾ ಕೃಷ್ಣಮೂರ್ತಿ ಗುರುವಾರ ‘ಹಿಂದೂಸ್ ಫಾರ್ ಬೈಡನ್’ನ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಂಘಟಕರು ಮಂಗಳವಾರ ತಿಳಿಸಿದ್ದಾರೆ.
ಹಾಲಿ ಅಧ್ಯಕ್ಷ ಹಾಗೂ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಪ್ರಚಾರ ತಂಡವು ‘ಹಿಂದೂ ವಾಯ್ಸಸ್ ಫಾರ್ ಟ್ರಂಪ್’ ಎಂಬ ಗುಂಪನ್ನು ರಚಿಸಿದ ಎರಡು ವಾರಗಳ ಬಳಿಕ, ಪ್ರತಿಸ್ಪರ್ಧಿ ತಂಡವು ಇದೇ ಮಾದರಿಯ ಗುಂಪನ್ನು ರಚಿಸಿದೆ.
ನವೆಂಬರ್ 3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಮತ್ತು ಅವರ ಉಪಾಧ್ಯಕ್ಷ ಅಭ್ಯರ್ಥಿ ಭಾರತೀಯ- ಅಮೆರಿಕನ್ ಕಮಲಾ ಹ್ಯಾರಿಸ್ ಜೋಡಿಯು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಜೋಡಿಯನ್ನು ಎದುರಿಸಲಿದೆ.







