ತಲ್ಲೂರು ಬಳಿ ರಸ್ತೆ ಅಪಘಾತ: ಬೈಕ್ ಸವಾರ ಮೃತ್ಯು

ಕುಂದಾಪುರ, ಸೆ.2: ತಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಬೈಕ್ ಸವಾರ ಮೃತಪಟ್ಟ ಘಟನೆ ಸೆ.2ರಂದು ರಾತ್ರಿ 8.30ರ ಸುಮಾರಿಗೆ ನಡೆದಿದೆ.
ಮೃತರನ್ನು ತಲ್ಲೂರು ನಿವಾಸಿ ಸೀತಾರಾಮ ಶೆಟ್ಟಿ(55) ಎಂದು ಗುರುತಿಸಲಾಗಿದೆ. ಬೈಂದೂರು ಕಡೆಯಿಂದ ಕುಂದಾಪುರ ಕಡೆ ಬರುತ್ತಿದ್ದ ಪಿಕ್‌ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಇರುವ ಡಿವೈಡರ್ ಮೇಲಕ್ಕೆ ಹತ್ತಿತ್ತೆನ್ನಲಾಗಿದೆ. ಇದೇ ವೇಳೆ ಕುಂದಾಪುರದಿಂದ ತಲ್ಲೂರು ಕಡೆಗೆ ಹೋಗುತ್ತಿದ್ದ ಸೀತಾರಾಮ್ ಶೆಟ್ಟಿ ತನ್ನ ಬೈಕ್ ನ ವೇಗವನ್ನು ಕಡಿಮೆಗೊಳಿಸಿದರು. ಆಗ ಹಿಂಬದಿಯಿಂದ ಬಂದ ಮೀನಿನ ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸವಾರ ಸೀತಾರಾಮ ಶೆಟ್ಟಿ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಕುಂದಾಪುರದಲ್ಲಿ ಉದ್ಯಮ ನಡೆಸುತ್ತಿರುವ ಇವರು, ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






