ಆಕಸ್ಮಿಕ ಗುಂಡೇಟು: ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ ಆಸ್ಪತ್ರೆಗೆ ದಾಖಲು

ಬೆಂಗಳೂರು, ಸೆ.2: ಹಿರಿಯ ಐಪಿಎಸ್ ಅಧಿಕಾರಿ, ಹೌಸಿಂಗ್ ಬೋರ್ಡ್ ಡಿಜಿ ಆಗಿರುವ ಆರ್.ಪಿ.ಶರ್ಮಾ ಅವರು ಸರ್ವಿಸ್ ರಿವಾಲ್ವಾರ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿದ್ದು, ಕುತ್ತಿಗೆಗೆ ಗುಂಡೇಟು ತಗಲಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಸಂಜೆ ಆರ್.ಪಿ.ಶರ್ಮಾ ಅವರು ಕೊತ್ತನೂರಿನ ತಮ್ಮ ನಿವಾಸದಲ್ಲಿ ಸರ್ವಿಸ್ ರಿವಾಲ್ವಾರ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿದೆ ಎಂದು ತಿಳಿದು ಬಂದಿದೆ. ಕೂಡಲೇ ಮನೆಯಲ್ಲಿದ್ದವರು ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಶರ್ಮಾರನ್ನು ದಾಖಲು ಮಾಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ನೀಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಆರ್.ಪಿ.ಶರ್ಮಾ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ. ಉತ್ತರ ಪ್ರದೇಶ ಮೂಲದ 1977ರ ಬ್ಯಾಚ್ ಅಧಿಕಾರಿಯಾಗಿರುವ ಆರ್.ಪಿ.ಶರ್ಮಾ ಬಿಎಂಟಿಎಫ್‍ನಲ್ಲಿ ಎಡಿಜಿಯಾಗಿದ್ದ ವೇಳೆ ಸಾಕಷ್ಟು ಹೆಸರು ಮಾಡಿದ್ದರು.
ಗನ್ ಕ್ಲೀನ್ ಮಾಡುವಾಗ ಮಿಸ್‍ಫೈರ್
'ಗನ್ ಕ್ಲೀನ್ ಮಾಡುವಾಗ ಮಿಸ್‍ಫೈರ್ ಆಗಿದೆ. ತಕ್ಷಣ ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದಾರೆ. ಆರ್.ಪಿ.ಶರ್ಮಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.”
-ಭೀಮಾಶಂಕರ ಗುಳೇದ್, ನಗರದ ಈಶಾನ್ಯ ವಿಭಾಗದ ಡಿಸಿಪಿ
ವೆಪನ್ ಕ್ಲಿನ್ ಮಾಡುವಾಗ ಮಿಸ್ ಫೈಯರ್ ಅಗಿದೆ. ಸದ್ಯ ಕೊಲಂಬಿಯಾ ಏಷ್ಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಸಮಸ್ಯೆ ಇಲ್ಲ.
-ಕಮಲ್‌ಪಂತ್, ನಗರ ಪೊಲೀಸ್ ಆಯುಕ್ತ







