ಕೋವಿಡ್ ವದಂತಿ ನಂಬಬೇಡಿ: ಶಾಸಕ ರಘುಪತಿ ಭಟ್

ಉಡುಪಿ, ಸೆ.2: ಕೋವಿಡ್-19 ಪಾಸಿಟಿವ್‌ಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಸುಳ್ಳು ಸುದ್ದಿಗಳ ವದಂತಿ ಹಬ್ಬುತಿದ್ದು, ಜಿಲ್ಲೆಯ ಜನತೆ ಇವುಗಳನ್ನು ನಂಬದಂತೆ, ಇವುಗಳಿಗೆ ಕಿವಿಗೊಡದಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಮನವಿ ಮಾಡಿದ್ದಾರೆ.
ಕೋವಿಡ್-19ನಿಂದ ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಆರಂಭದಲ್ಲಿ ಕೋವಿಡ್ ಮಾರಣಾಂತಿಕವಲ್ಲ, ಅದೊಂದು ಸಾಂಕ್ರಾಮಿಕ ರೋಗ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಸಮುದಾಯ ಮಟ್ಟದಲ್ಲಿ ವ್ಯಾಪಿಸಿರುವುದರಿಂದ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕರ ವಿಷಯ. ಹೀಗಾಗಿ ಈ ಬಗ್ಗೆ ಸಾಕಷ್ಟು ಜಾಗೃತಿಯನ್ನು ವಹಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಈ ನಡುವೆ ಕೋವಿಡ್ ಪರೀಕ್ಷೆಗೆ ಸಂಬಂಧಿಸಿದಂತೆ ಸುಳ್ಳುಸುದ್ದಿ ಹರಡುತ್ತಿದೆ. ಪಾಸಿಟಿವ್-ನೆಗೆಟಿವ್ ವರದಿ ವಿಚಾರದಲ್ಲಿ ಲಾಬಿ ನಡೆಯುತ್ತಿದ್ದು, ಕಮಿಷನ್ ಪಡೆಯಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಲಾಗುತ್ತಿದೆ. ಸಾರ್ವಜನಿಕರು ಇಂಥ ವದಂತಿಗಳಿಗೆ ಕಿವಿಗೊಡಬಾರದು ಎಂದವರು ಮನವಿ ಮಾಡಿದರು.
ಸೋಂಕಿನ ಯಾವುದೇ ಲಕ್ಷಣ ಕಂಡುಬಂದರೆ ತಕ್ಷಣ ಸಾರ್ವಜನಿಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯ ಕೇಂದ್ರಗಳಲ್ಲಿ ಉಚಿತ ಪರೀಕ್ಷೆಗೆ ವ್ಯವಸ್ಥೆ ಇದೆ. ಪಾಸಿಟಿವ್ ಬಂದರೂ ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಲು ಅವಕಾಶಗಳಿವೆ. ಸರಕಾರ ಹಾಗೂ ಇಲಾಖೆ ರೋಗಿಗಳ ಜೀವ ಉಳಿಸಲು ಅಗತ್ಯ ಕ್ರಮ ಕೈಗೊಂಡಿದೆ. ಹೀಗಾಗಿ ಜನರು ಅಂಜದೇ, ಆರೋಗ್ಯ ಇಲಾಖೆಯ ಸೂಚನೆಗಳನ್ನು ತಪ್ಪದೇ ಪಾಲಿಸಿ, ರೋಗ ಲಕ್ಷಣಗಳಿದ್ದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ ಎಂದವರು ಸಲಹೆ ನೀಡಿದರು.







