ಕೆನೋಶ ಪ್ರತಿಭಟನೆ: ಪೊಲೀಸರಿಗೆ ಬೆಂಬಲ ವ್ಯಕ್ತಪಡಿಸಿದ ಟ್ರಂಪ್

ಕೆನೋಶ (ಅಮೆರಿಕ), ಸೆ. 2: ಕರಿಯ ಜನಾಂಗೀಯರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ವಿಸ್ಕಾನ್ಸಿನ್ ರಾಜ್ಯದ ಕೆನೋಶ ನಗರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಭೇಟಿ ನೀಡಿದ್ದಾರೆ.
ಆದರೆ, ಅವರು ಅಲ್ಲಿಗೆ ಹೋಗಿದ್ದು ಜನಾಂಗೀಯ ದ್ವೇಷವನ್ನು ಉಪಶಮನಗಳಿಸುವುದಕ್ಕಾಗಿ ಅಲ್ಲ, ಬದಲಿಗೆ ಪೊಲೀಸರಿಗೆ ಬೆಂಬಲ ವ್ಯಕ್ತಪಡಿಸುವುದಕ್ಕಾಗಿ.
ಕಳೆದ ವಾರ ಕೆನೇಶ ನಗರದಲ್ಲಿ ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರು ಕರಿಯ ವ್ಯಕ್ತಿಯೊಬ್ಬರ ಮೇಲೆ ಅವರ ಮೂವರು ಮಕ್ಕಳ ಸಮ್ಮುಖದಲ್ಲೇ ಹಲವು ಸುತ್ತು ಗುಂಡು ಹಾರಿಸಿದ ಬಳಿಕ ಅಲ್ಲಿ ಜನಾಂಗೀಯ ತಾರತಮ್ಯ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಜನಾಂಗೀಯ ತಾರತಮ್ಯ ಮತ್ತು ಪೊಲೀಸರ ಬಲಪ್ರಯೋಗ ಮುಂತಾದ ವಿಷಯಗಳಲ್ಲಿ ಅಮೆರಿಕ ಧ್ರುವೀಕರಣಗೊಂಡಿದ್ದು, ಟ್ರಂಪ್ ತನ್ನ ಬಿಳಿಯ ಮತದಾರರ ಬುಡವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ.
ಪೊಲೀಸರ ಅತಿ ಬಲಪ್ರಯೋಗದಿಂದಾಗಿ ಉದ್ಭವಿಸಿರುವ ಜನಾಂಗೀಯ ಗಾಯಗಳನ್ನು ಟ್ರಂಪ್ ನಿರ್ಲಕ್ಷಿಸಿದ್ದಾರೆ ಹಾಗೂ ಕೊರೋನ ವೈರಸ್‌ನಿಂದಾಗಿ ಅಮೆರಿಕದಲ್ಲಿ ಸಂಭವಿಸಿರುವ 1.8 ಲಕ್ಷಕ್ಕೂ ಹೆಚ್ಚು ಸಾವುಗಳನ್ನು ಕಡೆಗಣಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಮೇಯರ್‌ಗಳ ಆಡಳಿತದ ನಗರಗಳಿಗೆ ಹೆಚ್ಚಿನ ಕೇಂದ್ರ ಸರಕಾರದ ಪಡೆಗಳನ್ನು ಕಳುಹಿಸುವುದಾಗಿ ಟ್ರಂಪ್ ಹೇಳಿದ್ದಾರೆ. ‘‘ಒಂದು ಹಂತದಲ್ಲಿ, ನಾವೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’’ ಎಂದು ಅವರು ಹೇಳಿದ್ದಾರೆ.







