ಸರಕಾರಿ ಭೂಮಿಯಲ್ಲಿ ಅಕ್ರಮ ಧಾರ್ಮಿಕ ಕಟ್ಟಡ ನಿರ್ಮಾಣ ಆರೋಪ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಆ.2: ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಧಾರ್ಮಿಕ ಕಟ್ಟಡ ನಿರ್ಮಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಚಿಕ್ಕಬಳ್ಳಾಪುರದ ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿ ಪಕ್ಕದ ಸರಕಾರಿ ಭೂಮಿಯಲ್ಲಿ ಚರ್ಚ್ ನಿರ್ಮಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳಾದ ಸ್ವಾಗತ್ ಹಾಗೂ ಲೋಕೇಶ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲ ಗುರುರಾಜ್ ಜೋಷಿ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಹಾಗೂ ಗೌರಿ ಬಿದನೂರು ತಹಶೀಲ್ದಾರ್ ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರರ ಕೋರಿಕೆ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿಯ ಸರ್ವೆ ನಂಬರ್ 106ರಲ್ಲಿ 42.8 ಎಕರೆ ಭೂಮಿ ಸರಕಾರದ ಗೋಮಾಳವಾಗಿದ್ದು, ದಾಖಲೆಗಳಲ್ಲಿ ಗೋಕಾಡು ಎಂದೇ ನಮೂದಿಸಲಾಗಿದೆ. ಆದರೆ ಇತ್ತೀಚೆಗೆ ಈ ಗುಡ್ಡದಲ್ಲಿ ಸ್ಥಳೀಯರಿಗೆ ತಿಳಿಯದಂತೆ ಸಣ್ಣ ತಿರುವುಗಳನ್ನು ಸೃಷ್ಟಿಸಲಾಗಿದೆ. ಅಲ್ಲದೇ, ಕೆಲ ಕ್ರಿಶ್ಚಿಯನ್ ವ್ಯಕ್ತಿಗಳು ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಆ ಜಾಗ ಕ್ರಿಶ್ಟಿಯನ್ನರಿಗೆ ಸೇರಿತ್ತು ಎಂಬಂತೆ ಕಟ್ಟು ಕಥೆಗಳನ್ನು ಹಬ್ಬಿಸುತ್ತಿದ್ದಾರೆ. ರಾತ್ರೋ ರಾತ್ರಿ ಚರ್ಚ್ ಕಟ್ಟುವ ಉದ್ದೇಶ ಹೊಂದಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅಲ್ಲದೇ, ಗುಡ್ಡದ ಮೇಲೆ ಧಾರ್ಮಿಕ ಪ್ರವಚನಗಳನ್ನು ನಡೆಸಲು ಅತಿ ಹೆಚ್ಚು ಶಬ್ದ ಹೊರಡಿಸುವ ಧ್ವನಿವರ್ಧಕಗಳನ್ನು ಬಳಸುತ್ತಿದ್ದಾರೆ. ಕಾರ್ಯಕ್ರಮದ ಬಳಿಕ ಊಟೋಪಚಾರಕ್ಕೆ ಬಳಸಿದ ಪ್ಲಾಸ್ಟಿಕ್ ತಟ್ಟೆ-ಲೋಟ ಮತ್ತಿತರ ತ್ಯಾಜ್ಯ ರಾಶಿಯಾಗಿ ಬಿದ್ದಿದ್ದು ಗುಡ್ಡವನ್ನು ಕಲುಷಿತಗೊಳಿಸುತ್ತಿದೆ. ಈ ತ್ಯಾಜ್ಯವನ್ನು ತೆರವು ಮಾಡಲು ವಾಹನಗಳು ಸಂಚರಿಸುವಷ್ಟು ರಸ್ತೆ ಇಲ್ಲವಾದ್ದರಿಂದ ಕಸದ ರಾಶಿ ಕೊಳೆಯುತ್ತಾ ಬಿದ್ದಿದೆ. ತ್ಯಾಜ್ಯ ಹಾಗೂ ಧ್ವನಿವರ್ಧಕಗಳಿಂದ ವನ್ಯ ಜೀವಿಗಳಿಗೂ ತೊಂದರೆಯಾಗುತ್ತಿದೆ. ಇದೇ ವಿಚಾರವಾಗಿ ಸ್ಥಳೀಯ ಹಿಂದೂಗಳೊಂದಿಗೆ ಅಸಮಾಧಾನವೂ ಉಂಟಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ, ಉಪವಿಭಾಗಾಧಿಕಾರಿಗೆ, ಗೌರಿಬಿದನೂರು ತಹಶೀಲ್ದಾರ್ ಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ 2020ರ ಜೂನ್ 3ರಂದು ಲಿಖಿತವಾಗಿ ದೂರು ನೀಡಿ, ಕ್ರಮ ಜರುಗಿಸುವಂತೆ ಕೋರಿದ್ದೇವೆ. ಆದರೆ, ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಸರಕಾರಿ ಗೋಮಾಳವಾಗಿರುವ ಗುಡ್ಡವನ್ನು ರಕ್ಷಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.







