ಎಪಿಎಂಸಿಯ 50 ಕೋಟಿ ರೂ. ವಂಚನೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಬೆಂಗಳೂರು, ಸೆ.2: ರಾಜ್ಯ ಕೃಷಿ ಮಾರಾಟ ಮಂಡಳಿ(ಎಪಿಎಂಸಿ)ಯ 50 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿಜಯ್ ಆಕಾಶ್ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚೆನ್ನೈ ನಿವಾಸಿ ವಿಜಯ್ ಆಕಾಶ್(57), ಪ್ರೇಮ್‍ರಾಜ್(32) ಹಾಗೂ ದಿನೇಶ್ ಬಾಬುಜಿ ಎಂದು ಗುರುತಿಸಲಾಗಿದೆ. ಈ ಮೂವರು ಆರೋಪಿಗಳೂ ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದರು.
ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಗಾಗಲೇ ಸಿಸಿಬಿ ಪೊಲೀಸರು ಒಟ್ಟು 15 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ 50 ಕೋಟಿ ರೂ.ಹಣ ದುರುಪಯೋಗವಾಗಿತ್ತು. ಮಾರುಕಟ್ಟೆಯಲ್ಲಿ ಕೃಷಿ ಉತ್ಪಾದನೆಗಳ ದರಗಳಲ್ಲಿ ನಷ್ಟವಾದ ಸಂದರ್ಭದಲ್ಲಿ ಸರಕಾರವು ರೈತರಿಗೆ ಬೆಂಬಲ ಬೆಲೆಯನ್ನು ಒದಗಿಸಲು ಆವರ್ತನಿಧಿ ಹಣವನ್ನು ಇಡುತ್ತದೆ. ಆರೋಪಿಗಳು 2019ನೆ ಸಾಲಿನ ನವೆಂಬರ್ ನಲ್ಲಿ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಇದ್ದಂತಹ ಹೆಚ್ಚುವರಿ 100 ಕೋಟಿ ರೂ.ಗಳನ್ನು ಸಿಂಡಿಕೇಟ್ ಬ್ಯಾಂಕ್ ಉತ್ತರಹಳ್ಳಿ ಶಾಖೆಗೆ ಒಂದು ವರ್ಷದ ಅವಧಿಗೆ ಶೇಕಡಾ 6ರ ಬಡ್ಡಿಯಂತೆ ನಿಶ್ಚಿತ ಠೇವಣಿಗಾಗಿ ವರ್ಗಾವಣೆ ಮಾಡಿದ್ದರು.
50 ಕೋಟಿ ರೂ.ಗಳನ್ನು ನಕಲಿ ಅಧಿಕಾರಿಯ ಹೆಸರಿನಲ್ಲಿ ಠೇವಣಿ ಇಟ್ಟು ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್, ಸಹಾಯಕ ಮ್ಯಾನೇಜರ್, ಮಂಡಳಿಯ ಡಿಜಿಎಂ ಮತ್ತಿತರರು ಶಾಮೀಲಾಗಿ ತಮಿಳುನಾಡಿನ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು ಎನ್ನಲಾಗಿದೆ.
ಆರೋಪಿ ವಿಜಯ್ ಆಕಾಶ್ ಎಂಬಾತನ ವಿರುದ್ಧ ಈಗಾಗಲೇ ಹೈದರಾಬಾದ್, ತಿರುಪತಿ, ಕೋಯಮತ್ತೂರಿನಲ್ಲಿಯೂ ಪ್ರಕರಣ ದಾಖಲಾಗಿದ್ದು, ವಿಚಾರಣೆಯ ಹಂತದಲ್ಲಿದೆ.







