ಸರಗಳ್ಳರಿಗೆ ಆಶ್ರಯ ನೀಡುತ್ತಿದ್ದ ಆರೋಪ: ಯುವಕನ ಬಂಧನ

ಬೆಂಗಳೂರು, ಸೆ.2: ಸರಗಳ್ಳರಿಗೆ ಆಶ್ರಯ ನೀಡುತ್ತಿದ್ದ ಆರೋಪಿಯೊಬ್ಬನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಾಜಸ್ತಾನ ಮೂಲದ ಜಗನ್‍ಲಾಲ್(22) ಎಂದು ಗುರುತಿಸಲಾಗಿದೆ. ಈತ ಚಾಮರಾಜಪೇಟೆಯ ರಾಘವೇಂದ್ರ ಬ್ಲಾಕ್‍ನಲ್ಲಿ ವಾಸವಾಗಿದ್ದಾನೆ. ಈ ಮೊದಲು ಗಾಂಧಿಬಜಾರ್ ನಲ್ಲಿ ಅಂಗಡಿಯನ್ನಿಟ್ಟುಕೊಂಡಿದ್ದನು. ವ್ಯಾಪಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಬೇರೆ ಕೆಲಸ ಮಾಡುತ್ತಿದ್ದ.
ರಾಜಾಜಿನಗರ ಪೊಲೀಸರು ಮೊನ್ನೆ ಇಬ್ಬರು ಸರಗಳ್ಳರನ್ನು ಗುಂಡು ಹಾರಿಸಿ ಸೆರೆಹಿಡಿದಿದ್ದರು. ಈ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಬೆಂಗಳೂರಿಗೆ ಬಂದಾಗ ಜಗನ್‍ಲಾಲ್ ತಮಗೆ ಆಶ್ರಯ ನೀಡಿದ್ದ ಎಂಬುದನ್ನು ಬಾಯಿಬಿಟ್ಟಿದ್ದರು.
ಬೆಂಗಳೂರಿನ ಹಲವು ಕಡೆ ಸರಗಳ್ಳತನ ನಡೆಸಿ ನಂತರ ಜಗನ್‍ಲಾಲ್ ಮನೆಯಲ್ಲಿ ಮೂರ್ನಾಲ್ಕು ದಿನ ಉಳಿದುಕೊಂಡು ನಂತರ ಹಿಂದಿರುಗುತ್ತಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜಾಜಿನಗರ ಠಾಣೆ ಪೊಲೀಸರು ಆರೋಪಿ ಜಗನ್‍ಲಾಲ್‍ನನ್ನು ಬಂಧಿಸಿ ಹಲವು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಆರೋಪಿ ಜಗನ್‍ಲಾಲ್ ಇದುವರೆಗೂ ಯಾರ್ಯಾರಿಗೆ ಆಶ್ರಯ ನೀಡಿದ್ದ, ಎಷ್ಟು ಜನರು ಸರಗಳ್ಳರಿದ್ದರು. ಎಲ್ಲೆಲ್ಲಿ ಸರ ಕಳ್ಳತನ ಮಾಡಿದ್ದಾರೆ ಎಂಬ ಬಗ್ಗೆ ರಾಜಾಜಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.







