ಜಾಗತಿಕ ಆವಿಷ್ಕಾರ ಸೂಚ್ಯಂಕ: 50 ಉನ್ನತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ

ಹೊಸದಿಲ್ಲಿ, ಸೆ. 2: ಜಾಗತಿಕ ಆವಿಷ್ಕಾರ ಸೂಚ್ಯಂಕದ ಪಟ್ಟಿಯಲ್ಲಿ ಭಾರತ ನಾಲ್ಕು ಸ್ಥಾನ ಜಿಗಿದು 48ನೇ ಸ್ಥಾನ ಪಡೆದುಕೊಂಡಿದೆ. ಈಗ ಅತ್ಯುನ್ನತ 50 ಆವಿಷ್ಕಾರದ ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಸ್ಥಾನ ಪಡೆದುಕೊಂಡಿದೆ.
ದಿ ವರ್ಲ್ಡ್ ಇಂಟಲೆಕ್ಚುವಲ್ ಪ್ರಾಪರ್ಟಿ ಆರ್ಗನೈಸೇಷನ್ (ಡಬ್ಲುಐಪಿಒ), ಕಾರ್ನೆಲ್ ವಿಶ್ವವಿದ್ಯಾನಿಲಯ ಹಾಗೂ ಐಎನ್‌ಎಸ್‌ಇಎಡಿ ಬ್ಯುಸಿನಸ್ ಸ್ಕೂಲ್ ಬುಧವಾರ ಈ ಜಾಗತಿಕ ಆವಿಷ್ಕಾರದ ಸೂಚ್ಯಂಕ (ಜಿಐಐ) ಬಿಡುಗಡೆಗೊಳಿಸಿದೆ. ಈ ವರ್ಷ ವಾರ್ಷಿಕ ರ್ಯಾಂಕ್‌ನಲ್ಲಿ ಸ್ವಿಝರ್‌ಲ್ಯಾಂಡ್, ಸ್ವೀಡನ್, ಅಮೆರಿಕ, ಇಂಗ್ಲೆಂಡ್ ಹಾಗೂ ನೆದರ್‌ಲ್ಯಾಂಡ್ ಅತ್ಯುನ್ನತ ಸ್ಥಾನದಲ್ಲಿದೆ. ಅಲ್ಲದೆ, ಈ ವರ್ಷದಲ್ಲಿ ಜಿಐಐ ಆವಿಷ್ಕಾರದ ರ್ಯಾಂಕ್‌ನಲ್ಲಿ ಭಾರತ, ಚೀನಾ, ಪಿಲಿಪ್ಪೈನ್ಸ್ ಹಾಗೂ ವಿಯೇಟ್ನಾಂ ಗಮನಾರ್ಹ ಪ್ರಗತಿ ಹೊಂದಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಸಂಘಟನೆ ತಿಳಿಸಿದೆ.
ಕಳೆದ ಐದು ವರ್ಷಗಳಿಂದ ಭಾರತದ ಪ್ರಗತಿ ಅದ್ಭುತ. ಈ ಪಟ್ಟಿಯಲ್ಲಿ 2015ರಲ್ಲಿ ಭಾರತ 81ನೇ ರ್ಯಾಂಕ್ ಪಡೆದುಕೊಂಡಿತ್ತು. 2016ರಲ್ಲಿ 15 ಸ್ಥಾನ ಜಿಗಿದು 66ನೇ ಸ್ಥಾನಕ್ಕೆ ಏರಿತ್ತು. 2017ರಲ್ಲಿ 6 ಸ್ಥಾನ ಜಿಗಿದು 60ನೇ ಸ್ಥಾನಕ್ಕೆ ಏರಿತ್ತು. 2018ರಲ್ಲಿ ಮತ್ತೆ 3 ಸ್ಥಾನ ಜಿಗಿದು 57ನೇ ಸ್ಥಾನಕ್ಕೆ ಏರಿತ್ತು. ಕಳೆದ ವರ್ಷ 5 ಸ್ಥಾನ ಜಿಗಿದು 52ನೇ ಸ್ಥಾನಕ್ಕೆ ತಲುಪಿತು. ಅಂತಿಮವಾಗಿ ಈ ಭಾರತ 50 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ ಹಾಗೂ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದುಕೊಂಡಿದೆ. ಐಸಿಟಿ (ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ) ಸೇವೆ ರಫ್ತು, ಸರಕಾರಿ ಆನ್‌ಲೈನ್ ಸೇವೆ, ವಿಜ್ಞಾನ ಹಾಗೂ ಎಂಜಿನಿಯರಿಂಗ್ ಪದವೀಧರರು ಹಾಗೂ ‘ಆರ್ ಆ್ಯಂಡ್ ಡಿ ಇಂಟೆನ್ಸಿವ್’ ಜಾಗತಿಕ ಕಂಪೆನಿಗಳಂತಹ ಸೂಚಕಗಳಲ್ಲಿ ಭಾರತ ಶ್ರೇಷ್ಟ 15 ಸ್ಥಾನಗಳ ಒಳಗೆ ಇದೆ.
ಕೆಳ ಮಧ್ಯಮ ಆದಾಯದ ಆರ್ಥಿಕತೆಯಾಗಿರುವ ಭಾರತ ಅತ್ಯಧಿಕ ಗುಣಮಟ್ಟದ ಆವಿಷ್ಕಾರ ಪ್ರದರ್ಶಿಸಲು ಕಾರಣವಾಗಿರುವ ಬಾಂಬೆ ಹಾಗೂ ದಿಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಹಾಗೂ ಬೆಂಗಳೂರಿನ ಭಾರತೀ ವಿಜ್ಞಾನ ಸಂಸ್ಥೆ ಅದರ ಅತ್ಯುನ್ನತ ವೈಜ್ಞಾನಿಕ ಪ್ರಕಟಣೆಗಳಂತಹ ವಿಶ್ವವಿದ್ಯಾನಿಲಯಗಳಿಗೆ ಕೃತಜ್ಞತೆಗಳು ಎಂದು ಜಾಗತಿಕ ಸಂಶೋಧನೆ ಸೂಚ್ಯಂಕ (ಜಿಐಐ) ತಿಳಿಸಿದೆ.







