ಪರಮಾಣು ಬಾಂಬ್‌ಗಳನ್ನು ದ್ವಿಗುಣಗೊಳಿಸಲು ಚೀನಾ ಯೋಜನೆ
ಅಮೆರಿಕ ಪೆಂಟಗನ್ ಇಲಾಖೆಯ ವರದಿ

ವಾಶಿಂಗ್ಟನ್, ಸೆ. 2: ಚೀನಾವು ತನ್ನಲ್ಲಿರುವ 200ಕ್ಕೂ ಅಧಿಕ ಪರಮಾಣು ಬಾಂಬ್‌ಗಳನ್ನು ಇನ್ನು ಒಂದು ದಶಕದಲ್ಲಿ ದ್ವಿಗುಣಗೊಳಿಸುವ ಯೋಜನೆಯನ್ನು ಹೊಂದಿದೆ ಎಂದು ಅವೆುರಿಕದ ರಕ್ಷಣಾ ಇಲಾಖೆ ಪೆಂಟಗಾನ್ ಮಂಗಳವಾರ ವರದಿಯೊಂದರಲ್ಲಿ ತಿಳಿಸಿದೆ.
ಇದೇ ಅವಧಿಯಲ್ಲಿ, ಈ ಬಾಂಬ್‌ಗಳನ್ನು ನೆಲ, ಸಮುದ್ರ ಮತ್ತು ಆಕಾಶದಿಂದ ಉಡಾಯಿಸಲಾಗುವ ಕ್ಷಿಪಣಿಗಳಿಗೆ ಅಳವಡಿಸಬಹುದಾದ ಪರಿಣತಿಯನ್ನು ಅದು ಗಳಿಸಲು ಶಕ್ತವಾಗುತ್ತದೆ ಎಂದು ವರದಿ ಹೇಳಿದೆ.
ತಂತ್ರಜ್ಞಾನದಲ್ಲಿ ಅವೆುರಿಕವನ್ನು ಸರಿಗಟ್ಟಲು ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿಯು ಉದ್ದೇಶಿಸಿದೆ ಹಾಗೂ ಜಂಟಿ ಯುದ್ಧ ಕಾರ್ಯಾಚರಣೆಯಲ್ಲಿ ಪರಿಣತಿಯನ್ನು ಪಡೆಯಲು ಮುಂದಾಗಿದೆ. ತೈವಾನ್ ಪರವಾಗಿ ಮಧ್ಯಪ್ರವೇಶಿಸುವ ಅಮೆರಿಕದ ಯಾವುದೇ ಪ್ರಯತ್ನವನ್ನು ತಡೆಯುವುದು ಅಥವಾ ಸೋಲಿಸಲು ಸಮರ್ಥವಾಗುವುದು ಚೀನಾದ ಜಂಟಿ ಯುದ್ಧ ಕಾರ್ಯಾಚರಣೆಯ ಗುರಿಯಾಗಿದೆ ಎಂದು ವರದಿ ಹೇಳಿದೆ.
ನೌಕೆ ನಿರ್ಮಾಣ, ನೆಲ ಆಧರಿತ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳು ಹಾಗೂ ವಾಯು ರಕ್ಷಣಾ ವ್ಯವಸ್ಥೆ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಚೀನಾ ಸೇನೆಯು ಈಗಾಗಲೇ ಅಮೆರಿಕವನ್ನು ಸರಿಗಟ್ಟಿದೆ ಅಥವಾ ಹಿಂದಿಕ್ಕಿದೆ ಎಂದಿದೆ.





