'ಉದ್ಯೋಗ ಕೊಟ್ಟು, ಆತ್ಮಹತ್ಯೆ ತಡೆಗಟ್ಟಿ' ಅಭಿಯಾನ ಆರಂಭಿಸಿದ ಯುವ ಕಾಂಗ್ರೆಸ್

ಬೆಂಗಳೂರು, ಸೆ. 3: 'ಯುವಕರಿಗೆ ಉದ್ಯೋಗ ಕೊಟ್ಟು, ಆತ್ಮಹತ್ಯೆ ತಡೆಗಟ್ಟಿ' ಎಂದು ಆಗ್ರಹಿಸಿ ಯುವ ಕಾಂಗ್ರೆಸ್‍ನಿಂದ ಅಭಿಯಾನ ಆರಂಭಿಸಿದ್ದು, ಎಲ್ಲ ಸಂಸದರು ಮತ್ತು ಸಚಿವರ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಎಚ್ಚರಿಸಿದ್ದಾರೆ.
ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಉದ್ಯೋಗ ಕೊಡಿ ಎಂದು ಅಭಿಯಾನ ಆರಂಭಿಸಿದ್ದು, ಈ ಅಭಿಯಾನವನ್ನ ಕರ್ನಾಟಕ ರಾಜ್ಯದಿಂದಲೇ ಪ್ರಾರಂಭ ಮಾಡಲಾಗುತ್ತಿದೆ. ದೇಶದದಲ್ಲಿ ಶೇ.65ರಷ್ಟು ಯುವಕರಿದ್ದು, ಅವರೆಲ್ಲರೂ ಉದ್ಯೋಗವಿಲ್ಲದೆ ಬೀದಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದ ಜನರಿಗೆ ವಾಗ್ದಾನ ನೀಡಿದಂತೆ ಒಟ್ಟು 12 ಕೋಟಿ ಜನರಿಗೆ ಉದ್ಯೋಗ ನೀಡಬೇಕಿತ್ತು. ಆದರೆ, ಮೋದಿ ನೇತೃತ್ವದ ಸರಕಾರ ಉದ್ಯೋಗ ಕೊಡುವ ಮಾತಿರಲಿ, ಇರುವ ಕೆಲಸಗಳನ್ನು ಕಸಿದುಕೊಂಡಿದೆ. ಕೊರೋನ ಮತ್ತು ಅವೈಜ್ಞಾನಿಕ ಸುದೀರ್ಘ ಲಾಕ್‍ಡೌನ್‍ನಿಂದ ಇರುವ ಉದ್ಯೋಗಗಳನ್ನು ಕಳೆದುಕೊಂಡಿದ್ದು, ಈ ಸಂಕಷ್ಟದಿಂದ ಜನರು ಬೀದಿಗೆ ಬಂದಿದ್ದಾರೆ. ಕೆಲಸವಿಲ್ಲದೆ ಕಂಗಾಲಾದ ಸಾಕಷ್ಟು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಉದ್ಯೋಗ ಕೊಡಿ ಎಂದರೆ ಪಕೋಡ ಮಾರಾಟ ಮಾಡಿ ಎಂಬ ಅತ್ಯಂತ ಬೇಜವಾಬ್ದಾರಿ ಸಲಹೆಯನ್ನು ನೀಡುತ್ತಾರೆ. ರಾಜ್ಯದಲ್ಲಿಯೂ ಅದೇ ಸ್ಥಿತಿ ಇದೆ. ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಈ ಹಿಂದೆಯೆ ಎಚ್ಚರಿಕೆ ನೀಡಿದ್ದರೂ, ಸರಕಾರ ಸೂಕ್ತ ಮುನ್ನಚ್ಚರಿಕೆ ಕೈಗೊಳ್ಳಲಿಲ್ಲ ಎಂದು ಅವರು ಟೀಕಿಸಿದರು.
ಕ್ರಮಕ್ಕೆ ಆಗ್ರಹ: ಮಾದಕ ದ್ರವ್ಯ (ಡ್ರಗ್ಸ್) ವಿರುದ್ಧ ಯುವ ಕಾಂಗ್ರೆಸ್ ಮೊದಲಿನಿಂದ ಹೋರಾಟ ಮಾಡುತ್ತಿದೆ. ಈ ಹಿಂದೆ ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲೂ ಡ್ರಗ್ಸ್ ಹಾವಳಿಯ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿತ್ತು. ಇದೀಗ ರಾಜ್ಯದಲ್ಲಿಯೂ ಈ ಬಗ್ಗೆ ಸುದ್ದಿಯಾಗುತ್ತಿದೆ. ಈ ದಂಧೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಮೂಲಕ ಯುಕವರನ್ನು ರಕ್ಷಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.
ಆಂತರೀಕ ಉತ್ಪನ್ನ ದರ(ಜಿಡಿಪಿ) ಗಣನೀಯ ಪ್ರಮಾಣದಲ್ಲಿ ಕುಸಿತಕ್ಕೆ ಕೇಂದ್ರದ ತಪ್ಪು ಆರ್ಥಿಕ ನೀತಿ ಮತ್ತು ಹಣಕಾಸು ಸಚಿವರೂ ಆಗಿರುವ ನಿರ್ಮಲಾ ಸೀತಾರಾಮನ್ ಅವರೇ ನೇರ ಕಾರಣ
-ಶ್ರೀನಿವಾಸ್ , ಯುವ ಕಾಂಗ್ರೆಸ್ ಅಧ್ಯಕ್ಷ







