ಉಡುಪಿ: ಗುರುವಾರ 12 ಸಾವಿರ ದಾಟಿದ ಕೊರೋನ ಸೋಂಕಿತರ ಸಂಖ್ಯೆ
ಏರುಗತಿಯಲ್ಲಿ ಮೃತರ ಸಂಖ್ಯೆ, ಕೋವಿಡ್-19ಗೆ ಮತ್ತೆ ನಾಲ್ವರ ಬಲಿ

ಉಡುಪಿ, ಸೆ.3: ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾಗುವವರ ಸಂಖ್ಯೆ ಏರುಗತಿಯಲ್ಲಿದ್ದು, ಗುರುವಾರ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ ಇಂದು ಕೋವಿಡ್-19ಕ್ಕೆ ಪಾಸಿಟಿವ್ ದೃಢಗೊಂಡವರ ಸಂಖ್ಯೆಯೂ 12 ಸಾವಿದ ಗಡಿಯನ್ನು ದಾಟಿ ಮುನ್ನಡೆದಿದೆ.
ಗುರುವಾರ ಜಿಲ್ಲೆಯಲ್ಲಿ 226 ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದು, ಈ ಮೂಲಕ ಈವರೆಗೆ ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆ 12150 ಆಗಿದೆ. ಅಲ್ಲದೇ ದಿನದಲ್ಲಿ 893 ಮಂದಿಯ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಕೋವಿಡ್ ಪಾಸಿಟಿವ್ ಪತ್ತೆಯಾದ 226 ಮಂದಿಯಲ್ಲಿ ಉಡುಪಿ ತಾಲೂಕಿನ 137 ಮಂದಿ, ಕುಂದಾಪುರ ತಾಲೂಕಿನ 59 ಹಾಗೂ ಕಾರ್ಕಳ ತಾಲೂಕಿನ 25 ಮಂದಿ ಇದ್ದು, ಉಳಿದಂತೆ ಹೊರಜಿಲ್ಲೆಯಿಂದ ಉಡುಪಿಗೆ ಚಿಕಿತ್ಸೆಗೆಂದು ಬಂದ ಐವರಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ ಎಂದವರು ತಿಳಿಸಿದರು.
ಗುರುವಾರ ಮಕ್ಕಳು ಸೇರಿದಂತೆ 128 ಮಂದಿ ಪುರುಷರು ಹಾಗೂ 98 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 60 ಪುರುಷರು ಹಾಗೂ 48 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ.ಸೂಡ ಹೇಳಿದರು.
ಪಾಸಿಟಿವ್ ದೃಢಗೊಂಡ 226 ಮಂದಿಯಲ್ಲಿ 121 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 68 ಮಂದಿ ಶೀತಜ್ವರದಿಂದ, ಎಂಟು ಮಂದಿ ಉಸಿರಾಟ ತೊಂದರೆಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ದೇಶೀಯ ಪ್ರವಾಸ ಹಾಗೂ ಅಂತಾರಾಷ್ಟ್ರೀಯ ಪ್ರವಾಸ ದಿಂದ ಮರಳಿದ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. 27 ಮಂದಿಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.
328 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಗುರುವಾರ 328 ಮಂದಿ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 134 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 194 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 9929ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2115 ಮಂದಿ ಇನ್ನೂ ಚಿಕಿತ್ಸೆ ಯಲ್ಲಿದ್ದಾರೆ. ಇವರಲ್ಲಿ 1045 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 1070 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.
1028 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಗುರುವಾರ ಒಟ್ಟು 1028 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯ ಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 784 ಮಂದಿ, ಕೋವಿಡ್ ಸಂಪರ್ಕಿತರು 91 ಮಂದಿ ಇದ್ದರೆ, ಉಸಿರಾಟ ತೊಂದರೆಯ 6 ಮಂದಿ, ಶೀತಜ್ವರದಿಂದ ಬಳಲುವ 55 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 92 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ಇಂದು ಪರೀಕ್ಷೆಗಾಗಿ ಪಡೆದ 1028 ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 74284ಕ್ಕೇರಿದೆ. ಇವುಗಳಲ್ಲಿ ಈವರೆಗೆ 61,868 ನೆಗೆಟಿವ್, 12150 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 106 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 266 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.
ನಾಲ್ವರು ಸಾವು: ಇಂದು ಜಿಲ್ಲೆಯಲ್ಲಿ ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳ ತಲಾ ಒಬ್ಬರು ಹಾಗೂ ಉಡುಪಿ ತಾಲೂಕಿನ ಇಬ್ಬರು ಸೇರಿ ನಾಲ್ವರು ಅನ್ಯ ಕಾಯಿಲೆಯೊಂದಿಗೆ ಕೊರೋನ ಸೋಂಕಿಗೆ ಮೃತಪಟ್ಟಿದ್ದಾರೆ. ಇವರಲ್ಲಿ ಮೂವರು ಪುರುಷಾದರೆ, ಒಬ್ಬರು ಮಹಿಳೆ ಸೇರಿದ್ದಾರೆ.
ಕಾರ್ಕಳದ 84ರ ಹರೆಯದ ಹಿರಿಯ ನಾಗರಿಕರು ಹೃದಯ ಸಮಸ್ಯೆ, ಕಿಡ್ನಿ ತೊಂದರೆ, ನ್ಯುಮೋನಿಯಾದಿಂದ ಬಳಲುತಿದ್ದು ಖಾಸಗಿ ಆಸ್ಪತ್ರೆ ಯಲ್ಲಿ ಕೊರೋನ ಸೋಂಕಿನ ಪಾಸಿಟಿವ್ ನೊಂದಿಗೆ ನಿನ್ನೆ ಮೃತಪಟ್ಟಿದ್ದಾರೆ. ಕುಂದಾಪುರದ 46ರ ಹರೆಯದ ಮದ್ಯವಯಸ್ಕರು ವಿವಿಧ ಕಾಯಿಲೆಗಳೊಂದಿಗೆ ಉಸಿರಾಟದ ತೊಂದರೆಯಿಂದಲೂ ಬಳಲುತಿದ್ದರು. ಇವರು ಸಹ ನಿನ್ನೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಉಡುಪಿಯ 65 ವರ್ಷ ಪ್ರಾಯದ ವೃದ್ಧರು ಹೃದಯ, ಕಿಡ್ನಿ ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆಯೊಂದಿಗೆ ಕೋವಿಡ್ ಸೋಂಕನ್ನು ಹೊಂದಿದ್ದು ಇಂದು ಮೃತಪಟ್ಟರು. ಉಡುಪಿಯ 45ರ ಹರೆಯದ ಮಹಿಳೆಯೂ ಬಹುಅಂಗಗಳ ವೈಫಲ್ಯದೊಂದಿಗೆ ಉಸಿರಾಟದ ಸಮಸ್ಯೆಗೆ ಸಿಲುಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಇಲಾಖಾ ಬುಲೆಟಿನ್ ತಿಳಿಸಿದೆ.







